ಜಿಲ್ಲೆ

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅನನ್ಯ

ಎ. ಆರ್. ರಘುರಾಮ

ನಾಪೋಕ್ಲು: ವಿವಿಧ ರಂಗದಲ್ಲಿ ಸಾಧನೆ ತೋರಿರುವ ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಮುರ್ನಾಡು ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಂಡೇಪಂಡ ಅಕ್ಕಮ್ಮ ಗಣಪತಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಹಲವು ರಂಗದಲ್ಲಿ ಮಹಿಳೆ ತನ್ನ ತನ ಸಾಬೀತುಪಡಿಸಿದ್ದಾಳೆ. ಅದಕ್ಕೆ ಸೂಕ್ತ ಸ್ಥಾನ-ಮಾನಗಳೂ ದೊರೆತಿವೆ ಎಂದರು. ಮಹಿಳೆ ತ್ಯಾಗಮಯಿ : ಕಸಾಪ ನಾಪೋಕ್ಲು ಹೋಬಳಿ ಘಟಕದ ಅಧ್ಯಕ್ಷ ನೆರವಂಡ ಉಮೇಶ ಮಾತನಾಡಿ, ಮಹಿಳೆ ತ್ಯಾಗಮಯಿ. ತನ್ನ ಕುಟುಂಬ ನಿರ್ವಹಣೆಯೊಂದಿಗೆ ಸಾಮಾಜಿಕ ರಂಗದಲ್ಲೂ ಮುಂಚೂಣಿಯಲ್ಲಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹ್ಯಾರಿಸ್, ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯ ಪಾತ್ರ ಅಗಾಧವಾದುದು. ಮಹಿಳೆ ಸಹನಾಮಯಿ ಎಂದರು.
ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. 10ನೇ ತರಗತಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕರಿಕೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎಂ. ಮಿನ್ನು ಮೋಳ್‌ಗೆ ರಘುರಾಮ ಅಸ್ರಣ್ಣ ಮತ್ತು ಲೀಲಾ ಅಸ್ರಣ್ಣ ದತ್ತಿ ಪುರಸ್ಕಾರ ನೀಡಿ ಗೌರಸಲಾಯಿತು.
ಗೌರಮ್ಮ ಮಾದಮ್ಮಯ್ಯ ಅವರ ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ ಕೃತಿಯನ್ನು ಮೂರ್ನಾಡು ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಗ್ರಂಥಾಲಯಕ್ಕೆ ನೀಡಲಾಯಿತು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ದಮಯಂತಿ, ಗ್ರಾಮಪಂಚಾಯತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ, ಮಡಿಕೇರಿ ತಾಲೂಕು ಕಸಾಪ ಕಾರ್ಯದರ್ಶಿ ಬಾಳೆಯಡ ದಿವ್ಯಾ ಮಂದಪ್ಪ ಇತರರು ಇದ್ದರು.