ಜಿಲ್ಲೆ

ಲೋಕಾಯುಕ್ತ ವಿಚಾರಣಾ ಹಂತದಲ್ಲಿವೆ ಜಿಲ್ಲೆಯ 129 ದೂರು

ಗೋಪಾಲಕೃಷ್ಣ ಪಾದೂರ್

ಉಡುಪಿ: ಲೋಕಾಯುಕ್ತ ಕೋರ್ಟ್​ನಲ್ಲಿ ಉಡುಪಿ ಜಿಲ್ಲೆಯ 129 ದೂರುಗಳು ವಿಚಾರಣಾ ಹಂತದಲ್ಲಿದ್ದು, ಇವುಗಳಲ್ಲಿ 41 ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಂಬಂಧಪಟ್ಟವರಿಗೆ 15 ದಿನ ಹಿಂದೆ ನೋಟೀಸ್​ ನೀಡಲಾಗಿದೆ. ಸೋಮವಾರ ದೂರುಗಳ ವಿಚಾರಣೆ ನಡೆಸಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್​.ಫಣೀಂದ್ರ ಹೇಳಿದರು.

ಶನಿವಾರ ಮಣಿಪಾಲ ರಜತಾದ್ರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಪ್ರಜೆಗಳು ಗೌರವಯುತ ಜೀವನ ನಡೆಸುವ ನಿಟ್ಟಿನಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕಾರ್ಯನಿರ್ವಹಿಸಬೇಕು. ಜನರ ಹಕ್ಕು ಮತ್ತು ಬಾಧ್ಯತೆಗಳನ್ನು ಮನವರಿಕೆ ಮಾಡಿಕೊಡಬೇಕು. ಸಂವಿಧಾನವು ಭ್ರೂಣದಿಂದ ಶವದವರೆಗೆ ಹಕ್ಕುಗಳನ್ನು ಸಂರಸಿದ್ದು, ಕಾರ್ಯಾಂಗ ಕರ್ತವ್ಯದಿಂದ ವಿಮುಖವಾಗುವ ಸಂದರ್ಭದಲ್ಲಿ ಕಾನೂನುಗಳನ್ನು ಎತ್ತಿಹಿಡಿಯುವ ಕೆಲಸವನ್ನು ನ್ಯಾಯಾಂಗ ಮಾಡುತ್ತದೆ. ಹಕ್ಕುಗಳಲ್ಲಿ 2 ವಿಧಗಳಿದ್ದು, ವೈಯಕ್ತಿಕ ಮತ್ತು ಸಾರ್ವಜನಿಕರಿಗೆ ಸಂಬಂಧಪಟ್ಟ ಹಕ್ಕು. ವೈಯಕ್ತಿಕ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬೇಕು. ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

3 ವಿಧದ ದೂರುಗಳು
ಲೋಕಾಯುಕ್ತಕ್ಕೆ ಸಾಮಾನ್ಯವಾಗಿ 3 ವಿಧದ ದೂರುಗಳು ಸಲ್ಲಿಕೆಯಾಗುತ್ತವೆ. ತೀರಾ ಬಡತನದಲ್ಲಿ ಇರುವವರು ಲಂಚ ನೀಡಲು ಸಾಧ್ಯವಾಗದೆ ಅರ್ಜಿಗಳನ್ನು ತ್ವರಿತ ವಿಲೇವಾರಿಗೆ ದೂರು ಸಲ್ಲಿಸುತ್ತಾರೆ. ಸೈದ್ಧಾಂತಿಕ ಜೀವನ ಮಾಡುವ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಲೋಕಾಯುಕ್ತ ಮೊರೆ ಹೋಗುತ್ತಾರೆ. ಕೆಲವರು ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ಕೊಡುವ ಉದ್ದೇಶದಿಂದಲೂ ದೂರು ಸಲ್ಲಿಸುತ್ತಾರೆ. ದುರುದ್ದೇಶ ಪೂರಿತ ದೂರು ಸಲ್ಲಿಸಿದ ವ್ಯಕ್ತಿಯ ವಿರುದ್ಧ ನ್ಯಾಯಾಲಯ ನಿಂದನೆಗೆ ಸಮನಾದ ಶಿೆ ವಿಧಿಸುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಜೊತೆಗೆ ನ್ಯಾಯಾಲಯದಲ್ಲಿ ಕ್ರಿಮಿನಲ್​ ಮೊಕದ್ದಮೆಯನ್ನೂ ಹೂಡಬಹುದು. ಅದೇ ರೀತಿ ಸರ್ಕಾರಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ಅಂಥವರ ವಿರುದ್ಧ ನ್ಯಾಯಾಂಗನಿಂದನೆ ಪ್ರಕರಣ ದಾಖಲಿಸಿ ಶಿೆ ವಿಧಿಸಬಹುದು. ಕ್ರಿಮಿನಲ್​ ಕೇಸ್​ ಹಾಕುವ ಅವಕಾಶವೂ ಇದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರ ದೂರುಗಳನ್ನು ಅಧಿಕಾರಿಗಳು ಧನಾತ್ಮಕವಾಗಿ ಸ್ವೀಕರಿಸಿ ಬಗೆಹರಿಸಬೇಕು. ಕಾನೂನುಬದ್ಧವಾಗಿ ಇತ್ಯರ್ಥಪಡಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿಯಿಂದ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ., ರಾಜ್ಯ ಲೋಕಾಯುಕ್ತ ವಿಚಾರಣೆಗಳ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ಪ್ರಭಾರ ಸಹಾಯಕ ನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್​ ಪಿ.ಎಂ. ಪಾಟೀಲ್​, ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​., ಡಿಎ್​ಒಗಳಾದ ಗಣಮತಿ ಮತ್ತು ಶಿವರಾಮ ಬಾದಾಮಿ, ಲೋಕಾಯುಕ್ತ ಪೊಲೀಸ್​ ಅಧೀಕ್ಷಕ ಸಿ.ಎ. ಸೈಮನ್​, ಉಪವಿಭಾಗಾಧಿಕಾರಿ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು. ಎಡಿಸಿ ಮಮತಾ ದೇವಿ ಸ್ವಾಗತಿಸಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್​ ಕುಮಾರ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.