ಜಿಲ್ಲೆ

ತಹಸೀಲ್ದಾರ್ಗೆ ಉಪಲೋಕಾಯುಕ್ತರಿಂದ​ ತರಾಟೆ

 ಬಂಗಾರಪೇಟೆ: ಜಿಲ್ಲೆಯಲ್ಲಿ ಭ್ರಷ್ಟರಿಗೆ ನಡುಕ ಹುಟ್ಟಿಸಿದ ಉಪಲೋಕಾಯುಕ್ತ ವೀರಪ್ಪ ಅವರು ಗುರುವಾರ ಇಡೀ ದಿನ ಬಂಗಾರಪೇಟೆಯ ವಿವಿಧ ಕಚೇರಿಗಳ ಮೇಲೆ ದಾಳಿ ನಡೆಸಿ, ಸಾರ್ವಜನಿಕರ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿದ್ದ ಕಡತಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳ ಚಳಿ ಬಿಡಿಸಿದರು.

ಅಧಿಕಾರಿಗಳು ಆಗಮಿಸುವ ಮೊದಲೇ ತಾಲೂಕು ಕಚೇರಿಗೆ ಲೋಕಾಯುಕ್ತ ಸಿಬ್ಬಂದಿ ಆಗಮಿಸಿ, ವಿವಿಧ ಶಾಖೆಗಳಲ್ಲಿ ಧೂಳು ಹಿಡಿದಿದ್ದ ಕಡತಗಳನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಉಪ ಲೋಕಾಯುಕ್ತರ ಗಮನಕ್ಕೆ ತಂದರು.

ಭೀಮ ಸಭಾಂಗಣದಲ್ಲಿ ಕೂಲಂಕಷವಾಗಿ ಕಡತ ಪರಿಶೀಲಿಸಿ ಹಲವು ತಿಂಗಳಿಂದ ಕಡತಗಳಿಗೆ ಮೋಕ್ಷ ಸಿಗದೆ ಇರುವ ಬಗ್ಗೆ ತಹಸೀಲ್ದಾರ್​ ವೆಂಕಟೇಶಪ್ಪ ಬಳಿ ವಿವರ ಕೇಳಿದಾಗ ಅಸ್ಪಷ್ಟ ಉತ್ತರ ನೀಡಿದ್ದರಿಂದ ವೀರಪ್ಪ ಅಸಮಾಧಾನಗೊಂಡರು.

ಕೇಸ್​ ವರ್ಕರ್​ ತೇಜಸ್ವಿನಿ ಅವರನ್ನು ಕರೆಸಿ ಕೇಳಿದರೆ ಇಬ್ಬರೂ ತಬ್ಬಿಬ್ಬಾದರು. ಎಷ್ಟು ಕಡತಗಳು ಪೆಂಡಿಂಗ್​ ಇವೆ ಎಂದು ಕೇಳಿದರೆ ಸಂಬಂಧ ವಿಲ್ಲದ ಉತ್ತರ ನೀಡುತ್ತೀರಾ ಎಂದು ತರಾಟೆ ತೆಗೆದುಕೊಂಡರು.

ಸುಮಾರು ಒಂದೂವರೆ ಗಂಟೆ ಕಾಲ ಸಭಾಂಗಣದಲ್ಲಿ ಪರಿಶೀಲಿಸಿ, ಕಡತಗಳು ವಿಲೇ ಮಾಡದೆ ಎಷ್ಟು ವರ್ಷದಿಂದ ಪೆಂಡಿಂಗ್​ ಇವೆ ಎಂದು ವೀರಪ್ಪ ಪ್ರಶ್ನಿಸಿದರು. ಈ ಬಗ್ಗೆ ಸರಿಯಾಗಿ ವಿವರ ನೀಡದೆ ಇದ್ದಾಗ ಮಿಸ್ಟರ್​ತಹಸೀಲ್ದಾರ್​ ಎಂದು ಗರಂ ಆದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲ ವಾರ್ಡ್​ಗಳನ್ನು ಪರಿಶೀಲಿಸಿದರು. 20 ವರ್ಷದ ಯುವತಿ ಟಿಬಿ ಕಾಯಿಲೆಯಿಂದ ದಾಖಲಾಗಿದ್ದನ್ನು ಗಮನಿಸಿ ವಿಚಾರಿಸಿದಾಗ ಗಂಡ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಪಡೆದು, ಯುವತಿಗೆ ಉಚಿತ ಕಾನೂನು ಸೇವಾ ವ್ಯವಸ್ಥೆಯಲ್ಲಿ ಲಾಯರ್​ ನೇಮಿಸಿ ಗಂಡನ ಕಡೆಯಿಂದ ಪರಿಹಾರ ಕೊಡಿಸುವ ಬಗ್ಗೆ ಪ್ರಾಧಿಕಾರದ ಸದಸ್ಯರಿಗೆ ಸೂಚಿಸಿದರು.

ಲೋಕಾಯುಕ್ತ ನ್ಯಾಯಧೀಶ ಅರವಿಂದ್​, ಸ್ಟೆನೋ ಸಂಪತ್​, ಲೋಕಾಯುಕ್ತ ಎಸ್ಪಿ ಧನಂಜಯ್​, ಡಿವೈಎಸ್ಪಿ ಸುಧೀರ್​, ಇನ್​ಸ್ಪೆಕ್ಟರ್​ ರೇಣುಕಾ, ಯಶ್ವಂತ್​ ಕುಮಾರ್​, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಪಿ.ನಟೇಶ್​ ಇದ್ದರು.

ರೆಕಾರ್ಡ್ಸ್​ ರೂಂಗೆ ಬೀಗ

ಮೊದಲ ಮಹಡಿಯಲ್ಲಿದ್ದ ರೆಕಾರ್ಡ್ಸ್​ ಕೊಠಡಿ ಪರಿಶೀಲನೆಗೆ ಹೋದಾಗ ಬೀಗ ಹಾಕಲಾಗಿತ್ತು. ಯಾರ್ರೀ ಈ ಶಾಖೆ ಇನಚಾರ್ಜ್​ ಎಂದು ಕೇಳಿದ ಬಳಿಕ ಎದುರುಗಡೆಯೇ ಇದ್ದ ಶಿರಸ್ತೇದಾರ್​ ಪ್ರಭಾಕರ್​, ಸಾರ್​ ಎಂದು ಮುಂದೆ ಬಂದರು. ಅವರ ವಿರುದ್ಧವೂ ಅಸಮಾಧಾನಗೊಂಡ ಉಪ ಲೋಕಾಯುಕ್ತರು, ಸಿಬ್ಬಂದಿ ಕರೆಯಿಸಿ ಬೀಗ ತೆಗೆಸಿ ಎಂದು ಸೂಚಿಸಿದರು. 20 ನಿಮಿಷ ಬೀಗ ತೆಗೆಯುವ ನಾಟಕದ ನಂತರ ಬಾಗಿಲು ತೆಗೆಯಲಾಯಿತು. ಸಿಬ್ಬಂದಿಯನ್ನು ಅಮಾನತುಮಾಡುವುದಾಗಿ ವೀರಪ್ಪ ಅವರು ಎಚ್ಚರಿಕೆ ನೀಡಿದರು.

ಕರ್ತವ್ಯ ಲೋಪದ ಹಿನ್ನೆಲೆ ತಹಸೀಲ್ದಾರ್​ಗೆ ಸಿಬ್ಬಂದಿ ವಿನೋದ್​ಅವರನ್ನು ಅಮಾನತಿನಲ್ಲಿಡಲು ಸೂಚಿಸಿದರು.

ಫೋನ್ ​ಪೇ ಪರಿಶೀಲನೆ

ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಸಿಬ್ಬಂದಿ ಮುರಳಿ ಮತ್ತು ಹೊರ ಗುತ್ತಿಗೆದಾರ ವಿಜಯಕುಮಾರ್​ ಅವರ ಮೊಬೈಲ್​ನಲ್ಲಿನ ಹಣದ ವಹಿವಾಟು ಪರಿಶೀಲಿಸಿದರು. ವಿಜಯ್​ ಕುಮಾರ್​ ಪೋನ್​ ಪೇನಲ್ಲಿ ಹಣದ ವಹಿವಾಟು ಗಮನಿಸಿ ಒಂದು ವರ್ಷದ ಸ್ಟೇಟ್​ಮೆಂಟ್​ ನೀಡಲು ಸೂಚಿಸಿದರು. 22 ವರ್ಷದಿಂದ ಹೊರ ಗುತ್ತಿಗೆದಾರರಾಗಿರುವ ನೀವು ಜೀನ್ಸ್​ ಪ್ಯಾಂಟ್​ ಹಾಕಿದ್ದೀರಾ?, ಡ್ರೆಸ್​ ಕೋಡ್​ ಗೊತ್ತಿಲ್ವಾ ಎಂದು ಪ್ರಶ್ನಿಸಿದರು. ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಸತ್ಯನಾರಾಯಣ ಅವರ ಮೊಬೈಲ್​ನಲ್ಲಿ ೋನ್​ ಪೇ ವಹಿವಾಟು ಪರಿಶೀಲಿಸಿದರು. 71 ಖಾತೆ ಅರ್ಜಿಗಳು ಉಳಿದಿದ್ದು, 30 ದಿನಗಳೊಳಗೆಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.