ಕಾಪು, ಬ್ರಹ್ಮಾವರಕ್ಕೆ ಉಪಲೋಕಾಯುಕ್ತ ಭೇಟಿ
ಪ್ರಕರಣ ದಾಖಲಿಸಲು ನ್ಯಾ. ಬಿ.ವೀರಪ್ಪ ಸೂಚನೆ
ರಾಜ್ಯ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಜಿಲ್ಲೆಯ ಬ್ರಹ್ಮಾವರ ಹಾಗೂ ಕಾಪು ತಾಲೂಕಿಬ ವಿವಿಧ ಪ್ರದೇಶಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಸರ್ಕಾರಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಜಿಲ್ಲೆಯ ಸರ್ಕಾರಿ ಇಲಾಖೆಯ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು.
ಬ್ರಹ್ಮಾವರದ ವಾರಂಬಳ್ಳಿಗೆ ಭೇಟಿ
ಇತ್ತೀಚೆಗೆ ಬೆಂಕಿ ದುರಂತ ಸಂಭವಿಸಿದ್ದ ಬ್ರಹ್ಮಾವರದ ವಾರಂಬಳ್ಳಿ ಗ್ರಾಪಂಗೆ ಸಂಬಂಧಿತ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ವೀರಪ್ಪ, ಅತ್ಯಂತ ಬೇಜವಾವಬ್ದಾರಿಯಿಂದ ಕಸದ ರಾಶಿ ಹಾಕಿದ್ದರಿಂದ ಬೆಂಕಿ ಅನಾಹುತ ಸಂಭವಿಸಿದೆ. ಇದಕ್ಕೆ ನುಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಪಿಡಿಒ ಆದರ್ಶ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು. ಬ್ರಹ್ಮಾವರ ತಾಪಂ ಇಒ ಇಬ್ರಾಹಿಂ ಪುರ, ಗ್ರಾಪಂ ಕಾರ್ಯದರ್ಶಿ ಶೇಖರ ನಾಯ್ಕ್ ಇದ್ದರು.
ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ
ಕಾಪು ಪುರಸಭೆಗೆ ಸಂಬಂಧಿತ ಡಂಪಿಂಗ್ ಯಾರ್ಡ್ಗೆ ಭೇಟಿ ನೀಡಿದ ನ್ಯಾ.ವೀರಪ್ಪ, ತೆರೆದ ಜಾಗದಲ್ಲಿ ಕಸ ಹಾಕಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಾರದ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.
ಆದಿಉಡುಪಿಯ ಎಪಿಎಂಸಿಗೆ ಭೇಟಿ
ಕೊನೆಯದಾಗಿ ಆದಿಉಡುಪಿಯ ಎಪಿಎಂಸಿಗೆ ಭೇಟಿ ನೀಡಿದ ನ್ಯಾ.ವೀರಪ್ಪ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಯನ್ನು ಖುದ್ದು ಪರಿಶೀಲಿಸಿದರು. ನೀರಿನ ವ್ಯವಸ್ಥೆ ಇಲ್ಲದಿರುವ ಹಾಗೂ ಶೌಚಾಲಯದಲ್ಲಿ ನೈರ್ಮಲ್ಯ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಯೂ ಸಹ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿಗಳಾದ ಡಾ.ಗಾನಾ ಪಿ.ಕುಮಾರ್, ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.
ಪತ್ರಿಕಾ ವರದಿ ನೋಡಿ ಬೆಂಕಿ ಬಿದ್ದ ವಾರಂಬಳ್ಳಿ ಗ್ರಾಪಂನ ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲಿಸಿದ್ದೇನೆ. ಎಲ್ಲ ಅಗಂಡಿಗಳೂ ಸುಟ್ಟು ಹೋಗುವ ಸಾಧ್ಯತೆ ಇತ್ತು. ಸುಟ್ಟ ತ್ಯಾಜ್ಯ ಕೂಡಲೇ ಶುಚಿ ಮಾಡಲು ತಿಳಸಿದ್ದೇನೆ. ಉಡುಪಿ ಎಪಿಎಂಸಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಕುಡಿಯುವ ನೀರು ಮೂರು ತಿಂಗಳಿಂದ ಬಂದಿಲ್ಲ. ಕಾಪು ಡಂಪಿಂಗ್ ಯಾರ್ಡ್ನಲ್ಲೂ ಕಸದ ರಾಶಿಯೇ ಇದ್ದು ಬಿಸಿಲ ಝಳದಿಂದ ಬೆಂಕಿ ಅನಾಹುತ ಆಗಬಹುದು. ಅಥವಾ ಮಳೆ ಬಂದರೆ ವಾಸನೆಯಿಂದಾಗಿ ಸುತ್ತಲಿನ ಜನರಿಗೆ ತೊಂದರೆ ಆಗಬಹುದು. ಮುಖ್ಯಾಧಿಕಾರಿಗೆ ಬರುವಂತೆ ತಿಳಿಸಿದರೂ ಬಂದಿಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
| ನ್ಯಾ. ಬಿ.ವೀರಪ್ಪ. ಉಪಲೋಕಾಯುಕ್ತ