ಕೋಲಾರ: ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರವಿದ್ದಾಗ ಬ್ಯಾಂಕ್ ಅಧಿಕಾರಿಗಳು ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಅಂಬಾನಿ ಹಾಗೂ ಲಲಿತ್ ಮೋದಿಗೆ ಸಾಲ ನೀಡುವುದು ಬೇಡವೆಂದು ಸಲಹೆ ನೀಡಿದರೂ ಬಲವಂತ ಮಾಡಿ ಸಾಲ ಕೊಡಿಸಿದ್ದರ ಫಲವಾಗಿ ಈಗ ಉದ್ಯಮಿಗಳು ದೇಶ ಬಿಟ್ಟು ಹೋಗಲು ಕಾರಣವಾಯಿತು ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠ ಸಂಚಾಲಕ ಡಾ.ಪ್ರಕಾಶ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಕೇಂದ್ರ-ರಾಜ್ಯ ಸರ್ಕಾರಗಳ ಬಜೆಟ್ ಕುರಿತು ಕಾರ್ಯಕರ್ತರಿಗೆ ಅರಿವು ಮೂಡಿಸುವ ಶಿಬಿರದಲ್ಲಿ ಮಾತನಾಡಿ, ಯುಪಿಎ ಆರ್ಥಿಕ ಶಿಸ್ತು ಪಾಲನೆ ಮಾಡದೆ ದೊಡ್ಡ ತಪ್ಪು ಮಾಡಿರುವುದರಿಂದ ಈಗಿನ ಎನ್‌ಡಿಎ ಸರ್ಕಾರ ಅವರ ತಪ್ಪುಗಳನ್ನು ಸರಿಪಡಿಸುವುದಕ್ಕೆ ಪರದಾಡುವಂತಾಗಿದೆ ಎಂದರು.
ತಾವು ಮಾಡಿದ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಮತ್ತು ಇನ್ನಿತರ ವಿರೋಧ ಪಕ್ಷಗಳು ಬಿಜೆಪಿ ಮೇಲೆ ಅನಗತ್ಯ ಗೂಬೆ ಕೂರಿಸುತ್ತಿವೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ದೇಶದ ಆರ್ಥಿಕ ಸ್ಥಿತಿಗೆ ಕಾರಣ ಯಾರು ಎಂದು ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.
ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿ ಶೂನ್ಯಕ್ಕಿಂತ ಕಡಿಮೆಯಿದೆ. ಆದರೆ ಭಾರತದ ಜಿಡಿಪಿ ದರ ಶೇ.4.5 ಇದ್ದು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ವಾರ್ಷಿಕವಾಗಿ 2.30 ಲಕ್ಷ ಕೋಟಿ ಉತ್ಪನ್ನ ಸೇವೆಯು ಮಂದಗತಿಯಲ್ಲಿದೆ. ಕಳೆದ 1992ರಲ್ಲಿ ಯುಪಿಎ ಆಡಳಿತದಲ್ಲಿ ಅಮದು 7.300 ಕೋಟಿ ಮಾತ್ರ ಇತ್ತು. ಈಗ ಅದೆಲ್ಲ ಸುಧಾರಣೆಯಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಲೋಚನೆ ಇಟ್ಟುಕೊಂಡು ಬಜೆಟ್ ಮಂಡಿಸಿದ್ದು, ವಿರೋಧ ಪಕ್ಷದವರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿ ನೋಟ್ ರದ್ದು, ಜಿಎಸ್‌ಟಿ ಜಾರಿಗೆ ತಂದಾಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮಾಡಿದರು. ಇದನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೆ ವಿಪಕ್ಷಗಳು ಟೀಕೆ ಮಾಡಿದವು. ಅವರಿಗೆ ಚಿನ್ನ ಕೊಟ್ಟರೂ ಟೀಕೆ ಮಾಡುವುದನ್ನು ಬಿಡಲ್ಲ ಎಂದು ಛೀಡಿಸಿದರು.
ಕೃಷಿ, ಆರೋಗ್ಯ, ಶಿಕ್ಷಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ನೀರಿನ ಸಮಸ್ಯೆ ನಿವಾರಣೆಗಾಗಿ ವಿಶೇಷ ಯೋಜನೆ ರೂಪಿಸಿದೆ, ನಮ್ಮ ಯುವಕರು ಸ್ವಾವಲಂಬಿಗಳಾಗಿ ಬದುಕಲು ಗಮನ ಹರಿಸಿದೆ. ಇವುಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸುವ ಮೂಲಕ ವಿರೋಧ ಪಕ್ಷಗಳ ಸ್ವಾರ್ಥ ರಾಜಕಾರಣ ಬಯಲು ಮಾಡಬೇಕು ಎಂದರು.
ಪ್ರಕೋಷ್ಠದ ಜಿಲ್ಲಾ ಸಂಚಾಲಕ ಎಸ್.ಬಿ.ಮುನಿವೆಂಕಟಪ್ಪ, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಖಜಾಂಜಿ ಅಮರ್‌ನಾಥ್, ಸಹ ಸಂಘಟಕ ಜಯರಾಮರೆಡ್ಡಿ ಉಪಸ್ಥಿತರಿದ್ದರು.