ಜಿಲ್ಲೆ

ಅನಗತ್ಯ ಸಂಚಾರ ತಡೆಗೆ ಪೊಲೀಸರ ಹೊಸ ಪ್ರಯೋಗ - ಕರೊನಾ ಆಂಬುಲೆನ್ಸ್‌ನಲ್ಲಿ ಸವಾರರ ರವಾನೆ

ರಾಯಚೂರು: ಅನಗತ್ಯ ತಿರುಗಾಡುವ ಬೈಕ್ ಸವಾರರನ್ನು ಪೊಲೀಸರು ಕರೊನಾ ವ್ಯಕ್ತಿಯಿರುವ ಅಂಬುಲೆನ್ಸ್‌ನಲ್ಲಿ ಹಾಕಿಕೊಂಡು ಕರೆದೊಯ್ಯುತ್ತಿದ್ದಾರೆ !

ಈ ಮಾದರಿಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅದೇ ರೀತಿ ರಾಯಚೂರು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಲಾಕ್‌ಡೌನ್ ನಿಯಮ ಕೊಂಚ ಮಟ್ಟಿಗೆ ಸಡಿಲಿಕೆ ನೀಡಿದ್ದನ್ನೆ ಆಧಾರವಾಗಿಸಿಕೊಂಡು ಕರೊನಾ ಸೋಂಕು ಲೆಕ್ಕಿಸದೆ ಜನರು ರಸ್ತೆಗೆ ಬರುವ ಮೂಲಕ ಟ್ರಾಫಿಕ್ ಜಾಮ್ ಮಾಡುತ್ತಿದ್ದಾರೆ. ಹೀಗಾಗಿ ಕರೊನಾ ರೋಗಿಯನ್ನಾಗಿ ಪ್ರತಿಬಿಂಬಿಸಿ ಒಬ್ಬ ವ್ಯಕ್ತಿಗೆ ಪಿಪಿಇ ತೊಡಿಸಿ, ಆತನನ್ನು ಆಂಬುಲೆನ್ಸ್‌ನಲ್ಲಿ ಮಲಗಿಸಿದ್ದರು. ಅದೇ ವ್ಯಾನ್‌ನಲ್ಲಿ ಅನಗತ್ಯ ತಿರುಗಾಡುವವರನ್ನು ಹಾಕುವ ಮೂಲಕ ಶನಿವಾರ ಎಚ್ಚರಿಕೆ ನೀಡಿದರು.

ನಗರದ ಚಂದ್ರಮೌಳೇಶ್ವರ ಹಾಗೂ ಮಹಾತ್ಮಾ ಗಾಂಧಿ ವೃತ್ತದಲ್ಲಿ ಅನವಶ್ಯಕ ಸಂಚರಿಸುವವರನ್ನು ಪೊಲೀಸರು ಹಿಡಿದು ಆಂಬುಲೆನ್ಸ್‌ನಲ್ಲಿ ಹಾಕಿದರು. ವಶಕ್ಕೆ ಪಡೆದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಡೀ ದಿನ ಠಾಣೆಯಲ್ಲಿ ಕೂರಿಸಿ ಶಿಕ್ಷೆ ನೀಡಿದ್ದಾರೆ. ಕರೊನಾ ತಡೆಗಾಗಿ ಸಾಮಾಜಿಕ ಅಂತರಕ್ಕಾಗಿ ಜನರು ಹೊರಬರದಂತೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಜನರು ಸಹ ಸಹಕರಿಸಬೇಕೆಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಮನವಿ ಮಾಡಿದರು. ಎಎಸ್ಪಿ ಶ್ರೀ ಹರಿಬಾಬು, ಸಿಪಿಐ ಫಸಿಯುದ್ದೀನ್, ಪಿಎಸ್‌ಐಗಳಾದ ಮಂಜುನಾಥ, ಶೀಲಾ ಸೇರಿ ಇತರರಿದ್ದರು.

ಕೆಲವರು ಅನವಶ್ಯಕ ರಸ್ತೆಗೆ ಬಂದ ಹಿನ್ನೆಲೆಯಲ್ಲಿ ಶನಿವಾರ ಚಂದ್ರಮೌಳೇಶ್ವರ ವೃತ್ತದಲ್ಲಿ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಟ್ರಾಫಿಕ್ ಜಾಮ್ ಆಗಿ ತೊಂದರೆ ಅನುಭವಿಸುವಂತಾಯಿತು. ತಕ್ಷಣ ಅಲ್ಲಿದ್ದ ಪೊಲೀಸರು ದೌಡಾಯಿಸಿ ಟ್ರಾಫಿಕ್ ತೆರವುಗೊಳಿಸಿ, ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ನೆರವಾದರು. ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿರುವ ಸವಾರರಿಗೆ ಪೊಲೀಸರು ತುಸು ಲಾಠಿ ರುಚಿಯೂ ತೋರಿಸಿದರು.