ಮೈಸೂರು: ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) ಮೂರು ದಿನಗಳ ಕಾಲ ಆಯೋಜಿಸಿರುವ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಕಾವಾ ವಿದ್ಯಾರ್ಥಿಗಳು ಅದ್ಭುತ ಕಲಾ ಪ್ರಪಂಚವನ್ನು ತೆರೆದಿಟ್ಟಿದ್ದಾರೆ.
ಕಲಾ ಪ್ರದರ್ಶನ ಮೇ 25ರವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ರಚಿಸಿದ ಚಿತ್ರಕಲೆಗಳು, ಶಿಲ್ಪಕಲೆಗಳು ಹಾಗೂ ಅಪರೂಪದ ಛಾಯಾಚಿತ್ರಗಳು ಹಾಗೂ ಕಿರುಚಿತ್ರಗಳನ್ನು ಇಲ್ಲಿ ವೀಕ್ಷಿಸಬಹುದು. ಅಂಬಾರಿ ಮೆರವಣಿಗೆ, ದಸರಾ ಆನೆಗಳು, ಹಂಪಿಯ ಕಲ್ಲಿನ ರಥ, ಚಾಮುಂಡೇಶ್ವರಿ ದೇವಾಲಯ, ದೊಡ್ಡಗಡಿಯಾರ ಹಾಗೂ ಪ್ರಕೃತಿಯ ಸುಂದರ ಚಿತ್ರಗಳನ್ನು ವಿದ್ಯಾರ್ಥಿಗಳು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಕಲಾ ವಿನ್ಯಾಸಕ ಶಶಿಧರ ಅಡಪ ಮಾತನಾಡಿ, ಕಲಾವಿದರು ಸ್ವಾರ್ಥವನ್ನು ಬಿಟ್ಟು ನಿಂತಾಗ ಮಾತ್ರ ಸಮಾಜದ ಜನರ ಯೋಚನಾ ಲಹರಿಗಳನ್ನು ಬದಲು ಮಾಡಬಹುದು. ಮೊದಲಿನಿದಂಲೂ ಕಲಾವಿದರಿಗೆ ಹಿಂಜರಿಕೆ ಎನ್ನುವುದು ಬಂದು ಬಿಟ್ಟಿದೆ. ಹಿಂಜರಿಕೆ ಇರುವವರು ಉತ್ತಮ ಕಲಾವಿದರು ಎಂದು ತಿಳಿಯಬಾರದು. ಹೀಗಾಗಿ ಭವಿಷ್ಯದಲ್ಲಿ ಬರುವ ಕಲಾವಿದರು ಹಿಂಜರಿಕೆ ಬಿಡಬೇಕು ಎಂದರು.
ಕಲಾವಿದನಿಗೆ ಕೌಶಲವೊಂದೇ ಸಾಕಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಅವರ ವ್ಯಕ್ತಿತ್ವವೂ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಿಮ್ಮ ವ್ಯಕ್ತಿತ್ವವನ್ನು ಕಲಾತ್ಮಕವಾಗಿರುವುದರ ಜತೆಗೆ ಆಧುನಿಕ ಜಗತ್ತಿಗೆ ಬೇಕಾದ ರೀತಿಯಲ್ಲಿ ಪ್ರಯತ್ನ ಮಾಡುವ ಅವಶ್ಯಕತೆಯನ್ನು ಸಮಾಜ ಕೇಳುತ್ತದೆ. ಇಂದಿನ ಸಮಾಜ ಮಾರಾಟದ ಪ್ರಪಂಚವಾಗಿದೆ. ಇಲ್ಲಿ ಎಷ್ಟೇ ಚೆನ್ನಾಗಿರುವ ವಸ್ತು ಇದ್ದರೂ ಸಹ ಅದಕ್ಕೊಂದು ಬಣ್ಣ, ಬೆಡಗು ಇದ್ದರೆ ಸಮಾಜದಲ್ಲಿ ಸುಂದರವಾಗಿ ಕಾಣುತ್ತದೆ ಎಂದರು.
ಕಲೆಯ ಜತೆಗೆ ಸಂವಹನ ಕೌಶಲ್ಯ, ಬರವಣಿಗೆಯ ಮುಖಾಂತರ ಹೇಗೆ ಸಮಾಜದಲ್ಲಿ ನಿಮ್ಮ ಕಲೆಯನ್ನು ಹೇಗೆ ಗುರುತಿಸುವಂತೆ ಮಾಡುತ್ತೀರಿ ಎಂಬುದನ್ನು ಗಮನಿಸಬೇಕು. ಇಂದು ಕಲೆ ವೈಯಕ್ತಿಕ ಆಧಾರದ ಮೇಲೆ ನಿಲ್ಲುವುದಿಲ್ಲ. ನಾಯಕತ್ವದ ಗುಣವೂ ಇರಬೇಕು. ಈ ನಿಟ್ಟಿನಲ್ಲಿ ಒಂದು ಸಣ್ಣ ಸಮುದಾಯದ ಜತೆಗೂ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ಎ.ದೇವರಾಜು ಮಾತನಾಡಿ, ಕಾವಾ ಕಾಲೇಜು ಎಂದರೆ ಕಲೆಯನ್ನೇ ತುಂಬಿಕೊಂಡಿರುವ ಆವರಣ ಎಂದು ಬಿಂಬಿಸಲಾಗುತ್ತದೆ. ಕಾವಾ ಕಾಲೇಜು ಕೇವಲ ಮೈಸೂರು ಜಿಲ್ಲೆಗೆ, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾವಾ ಕಾಲೇಜಿನ ಘಮಲು ದೇಶಾದ್ಯಂತ ಹರಡಿದೆ. ಇತರೆ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಕಾವಾ ಕಾಲೇಜಿನಲ್ಲಿ ಉತ್ತಮವಾದ ಮುಕ್ತವಾದ ವಾತಾವರಣ ಇದೆ. ಇದನ್ನು ಇಲ್ಲಿಯ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಶೈಕ್ಷಣಿಕ ಸಂಯೋಜಕ ಎ.ಪಿ.ಚಂದ್ರಶೇಖರ್, ಕುಂಚ ಕಾವ್ಯ ವಿದ್ಯಾರ್ಥಿ ಸಮಿತಿಯ ಕಾರ್ಯದರ್ಶಿ ಸ್ಕಂದ ಆರ್. ಭಾರದ್ವಾಜ್, ಉಪಕಾರ್ಯದರ್ಶಿ ಹೇಮಂತ್ ಹಾಜರಿದ್ದರು.
ಅತಿಥಿಗಳನ್ನು ಬಕ್ರ ಮಾಡಿದ ವಿದ್ಯಾರ್ಥಿ
ಕಾವಾ ಕಾಲೇಜಿನ ಪ್ರಮೋದ್ ಅತಿಥಿಗಳು ಹಾಗೂ ವಿದ್ಯಾರ್ಥಿಗಳನ್ನು ಬಕ್ರ ಮಾಡುವ ಮೂಲಕ ಎಲ್ಲರ ಮೊಗದಲ್ಲಿ ನಗು ತರಿಸಿದ. ಕಾವಾ ಆವರಣದಲ್ಲಿ ಪ್ರಮೋದ್ ಕುರಿಗಳ ಮನೆ ನಿರ್ಮಾಣ ಮಾಡಿದ್ದ. ಆದರೆ, ಅಲ್ಲಿ ಕುರಿಗಳೇ ಇರಲಿಲ್ಲ. ಆ ಕುರಿ ಮನೆಗೆ ಅತಿಥಿಗಳು ಹಾಗೂ ವಿದ್ಯಾರ್ಥಿಗಳನ್ನು ಆಹ್ವಾನಿಸಿದ ಪ್ರಮೋದ್ ‘ಜನರು ಈ ರೀತಿ ಬ್ರಕ’ ಆಗುತ್ತಾರೆ ಎಂದು ಹೇಳುವ ಮೂಲಕ ಅವರನ್ನು ಬಕ್ರ ಮಾಡಿದ. ನಾನು ನಿರ್ಮಾಣ ಮಾಡಿರುವ ಕುರಿ ಮನೆಗೆ ಕುರಿಗಳನ್ನು ತರುತ್ತೇನೆ ಎಂದು ಸಹಪಾಠಿಗಳಿಗೆ ಹೇಳಿದ್ದೆ. ಎಲ್ಲರು ನಾನು ಯಾವಾಗ ಕುರಿ ತರುತ್ತೇನೆ ಎಂದು ಕಾಯುತ್ತಿದ್ದರು. ಆದರೆ, ನಾನು ಕುರಿ ಮನೆಗೆ ಎಲ್ಲರನ್ನು ಆಹ್ವಾನಿಸಿ ಅವರನ್ನು ಬಕ್ರ ಮಾಡಿದ್ದೇನೆ. ನವ ಯುಗದಲ್ಲಿ ಜನರು ಈ ರೀತಿ ಮೋಸ ಹೋಗುತ್ತಾರೆ. ಜನರು ಮೋಸ ಹೋಗಬಾರದು ಎಂಬ ಸಂದೇಶ ಸಾರಲು ಈ ರೀತಿಯ ಪರಿಕಲ್ಪನೆ ಮಾಡಿದ್ದೇನೆ ಎಂದು ಪ್ರಮೋದ್ ತಿಳಿಸಿದರು.
ಬೃಹತ್ ಗಾತ್ರದ ಜಿಂಕೆ ಕೊಂಬು..!
ಕಾವಾ ವಿದ್ಯಾರ್ಥಿ ನರೇಶ್ ಕುಮಾರ್ ಕವಲೊಡೆದ ಮರದ ಕೊಂಬೆ ಬಳಸಿ ಅದನ್ನು ಜಿಂಕೆಯ ಕೊಂಬಿನ ರೂಪ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಜಿಂಕೆ ಕೊಂಬು ನಿರ್ಮಾಣಕ್ಕೆ ಅವರು ಒಂದು ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಮರದಲ್ಲಿ ನಿರ್ಮಿಸಿದ ಬೃಹತ್ ಗಾತ್ರದ ಈ ಜಿಂಕೆ ಕೊಂಬು ಕಾವಾದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದೇ ವಿದ್ಯಾರ್ಥಿ ದನದ ಹಲ್ಲುಗಳು ಹಾಗೂ ಮೂಳೆಗಳನ್ನು ಬಳಸಿ ‘ಹಲ್ಲಿನ ಸಾಮ್ರಾಜ್ಯ’ ಹೆಸರಿನಲ್ಲಿ ನಿರ್ಮಿಸಿದ ಅರಮನೆ ಎಲ್ಲರ ಗಮನ ಸೆಳೆಯುತ್ತಿದೆ.
ಕಾವಾದಲ್ಲಿ ‘ಮಹಾಗನಿ’ ಪಕ್ಷಿ..!
ಇದೇನಿದು ಹೊಸ ಪಕ್ಷಿ ಎಂದು ಅಚ್ಚರಿ ಪಡಬೇಡಿ. ಕಾವಾ ವಿದ್ಯಾರ್ಥಿ ಶರಣ್ ಮಹಾಗನಿ ಮರದ ಹೂವನ್ನು ಬಳಕೆ ಮಾಡಿಕೊಂಡು ಪಕ್ಷಿಯ ಕಲಾಕೃತಿ ರಚಿಸಿದ್ದು, ಈ ಕಲಾಕೃತಿ ಎಲ್ಲರಿಗೂ ಮುದ ನೀಡುತ್ತಿದೆ. ಕೇವಲ ಪಕ್ಷಿ ಕಲಾಕೃತಿ ಮಾತ್ರವಲ್ಲದೆ ಜಿರಳೆ ಕಲಾಕೃತಿಯನ್ನು ಸಹ ಮಹಾಗನಿ ಹೂ ಬಳಕೆ ಮಾಡಿಕೊಂಡು ನಿರ್ಮಾಣ ಮಾಡುವ ಮೂಲಕ ಎಲ್ಲರು ಬೆರಗಾಗುವಂತೆ ಮಾಡಿದ್ದಾನೆ.