ಜಿಲ್ಲೆ

ಚಿಣ್ಣರ ಜಾಣರ ಜಗುಲಿಯಲ್ಲಿ ಮಕ್ಕಳ ಪ್ರತಿಭೆ ಅನಾವರಣ

ಕಿಕ್ಕೇರಿ: ಟಿವಿ, ಮೊಬೈಲ್ ಯುಗದಲ್ಲಿ ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಬುಧವಾರ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮ ಮುಖ್ಯ ಭೂಮಿಕೆಯಾಯಿತು.


ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಹೇಮಗಿರಿ ಶಾಖಾ ಮಠ ಕಾರ್ಯದರ್ಶಿ ಜಿ.ಎನ್.ರಾಮಕೃಷ್ಣೇಗೌಡ ಮಾರ್ಗದರ್ಶನದಲ್ಲಿ ಬುಧವಾರ ಹೋಬಳಿಯ ಅನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ಮೂಡಿಬಂದ ಜಾಣರ ಜಗುಲಿ ರಾಜ್ಯದಲ್ಲಿಯೇ ಮೊದಲ ಯತ್ನವಾಗಿದೆ. ದೇಸಿ ಸಂಸ್ಕೃತಿ, ಕಲೆ, ವಾಕ್‌ಚಾತುರ್ಯಕ್ಕೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇರುವ ಪ್ರತಿಭೆ ಎಕ್ಕಿ ತೆಗೆದಿದೆ. ಬ್ರೇಕ್ ಡಾನ್ಸ್‌ನಂತಹ ವಿಚಿತ್ರ ಮನರಂಜನೆಗಳಿಂದ ಬೇಸತ್ತಿದ್ದ ಮನಸ್ಸಿಗೆ ಮುದ ನೀಡಿದೆ ಎಂದು ಪ್ರಶಂಸಿದರು.


ಹಣ ಬಲವೋ, ಗುಣ ದೊಡ್ಡದೋ ಎನ್ನುವ ವಿಷಯ ಮಂಡನೆಯ ಜಾಣರ ಜಗುಲಿ ಚರ್ಚೆಯಲ್ಲಿ ಮಕ್ಕಳು ಹುರುಳಿ ಉರಿದಂತೆ ಮಾತನಾಡಿದರು. ಹರಟೆಯಲ್ಲಿ ಜುಗಲ್‌ಬಂದಿ, ವಾಕ್ಸಮರ ಸೊಗಸಾಗಿ ಮೂಡಿ ಬಂದಿತು. 3 ಗಂಟೆಯ ಹರಟೆ ನಾನ್‌ಸ್ಟಾಪ್ ಕಾರ್ಯಕ್ರಮವಾಗಿ ಎಲ್ಲರ ಮನಗೆದ್ದಿತು.


ಜಿ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳು ಟಿವಿ, ಮೊಬೈಲ್ ಗೀಳಿನಿಂದ ಹೊರಬಾರಲಾರದೆ ಚಡಪಡಿಸುತ್ತಿದ್ದರು. ವಿನೂತನ ಪ್ರಯೋಗವಾಗಿ ಮಠದ ಸಂಸ್ಥೆಗಳಾದ ಧಾರವಾಡ ಸೇರಿದಂತೆ ರಾಜ್ಯದ ಎಲ್ಲ ಪ್ರದೇಶಗಳಲ್ಲಿನ ಸಂಸ್ಥೆಯ ಶಾಲೆಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಹೆಚ್ಚು ಪತ್ರಿಕೆ, ಪುಸ್ತಕ ಓದುವುದರಿಂದ ಮಕ್ಕಳ ಜ್ಞಾನ ವೃದ್ಧಿಸಲಿದೆ. ಇಂತಹ ವೇದಿಕೆಗೆ ಓದುವ ಹವ್ಯಾಸ ಅವಶ್ಯವಾಗಿದೆ. ಜತೆಗೆ ಶಿಕ್ಷಕರ, ಮಕ್ಕಳ ಪರಿಶ್ರಮ, ಜ್ಞಾನ, ಗ್ರಹಿಕೆ ಮುಖ್ಯ ಎಂಬುದನ್ನು ವೇದಿಕೆ ತೋರಿಸಿಕೊಟ್ಟಿದೆ. ನಮ್ಮ ದೇಸಿ ಸಂಸ್ಕೃತಿ, ಆಚರಣೆಗಳು ಪಾಲಿಸಿ ಮಕ್ಕಳ ಸದೃಢ ಮನಸ್ಸು ಕಟ್ಟಲು ಮತ್ತಷ್ಟು ಇಂತಹ ಕಾರ್ಯಕ್ರಮ ರೂಪಿಸಲಾಗುವುದು ಎಂದರು.


ಎಲ್ಲೆಡೆ ಹಣಕ್ಕಾಗಿ ಲಂಚಾವತಾರ, ಭ್ರಷ್ಟಾಚಾರ ವ್ಯಾಪಿಸಿದೆ. ಹಣವಿಲ್ಲದೆ ಬದುಕಿಲ್ಲ ಎನ್ನುವ ಭ್ರಮೆ ಮೂಡಿದೆ. ಶ್ರೇಷ್ಠ ವ್ಯಕ್ತಿಗಳೆಲ್ಲ್ಲರೂ ಬಡತನದಲ್ಲಿ ಬದುಕಿ ನಾಡಿಗೆ ದಾರಿದೀಪವಾಗಿದ್ದಾರೆ. ಎಳೆಯ ಮನಸ್ಸಿಗೆ ಉತ್ತಮ ನಡೆ, ನುಡಿಯ ವಾತಾವರಣ ಕಲ್ಪಿಸಲು ಇಂತಹ ವೇದಿಕೆ ಎಲ್ಲ ಶಾಲೆಗಳಲ್ಲಿ ಮೂಡಿದರೆ ಸುಭದ್ರ ನಾಡು ನಿರ್ಮಾಣವಾಗಲಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.


ಸಾಹಿತಿ ಹರಿಚರಣತಿಲಕ್ ಜಾಣರ ಜಗುಲಿಯ ಉಸ್ತುವಾರಿ ವಹಿಸಿದ್ದರು. ಜಾಣರ ಜಗುಲಿ ಕಾರ್ಯಕ್ರಮದಲ್ಲಿ ಹಣ, ಗುಣ ಎರಡು ಬಲುಮುಖ್ಯವಾಗಿದೆ ಎಂದು ಅಂತಿಮವಾಗಿ ತೀರ್ಪು ಮಂಡಿಸಿದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ನಗದು ಬಹುಮಾನ ನೀಡಿ ಉತ್ತೇಜಿಸಲಾಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರನ್ನೂ ಗೌರವಿಸಲಾಯಿತು.


ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಯನ್ನು ಆಕರ್ಷಕ ನೃತ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.
ಸಿಂಚನಾ, ಉಮಾ, ಐಶ್ವರ್ಯ, ಡಿ.ಪಿ.ಯಶ್ವಂತ್, ಕೀರ್ತನಾ, ಸರಸ್ವತಿ, ಪ್ರಿಯಾಂಕ, ಡಿ.ಆರ್.ಯಶ್ವಂತ್ ಹರಟೆಯಲ್ಲಿ ಭಾಗವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ನಂಜೇಶ್, ಮುಖಂಡರಾದ ಬಿ.ಎಸ್.ಮಂಜುನಾಥ್, ಎ.ಆರ್.ಮಂಜುನಾಥ್, ಶ್ರೀನಿವಾಸ್, ಸಾಹಿತಿ ಹರಿಚರಣತಿಲಕ್, ಮುಖ್ಯಶಿಕ್ಷಕ ಸಿ.ಪಿ.ಪುರುಷೋತ್ತಮ, ಎಂ.ಪಿ.ಪ್ರಕಾಶ್, ಎಸ್.ಪಿ.ಮಂಜುನಾಥ್, ಯೋಗೇಶ್, ರವಿಕುಮಾರ್, ಶಂಕರೇಗೌಡ, ದೇವರಾಜೇಗೌಡ, ರೋಹಿತ್, ಶಿವರಾಜು, ಸತ್ಯರಾಜು, ನರಸಿಂಹಮೂರ್ತಿ ಮತ್ತಿತರರಿದ್ದರು.