ಹುಬ್ಬಳ್ಳಿ : ಬಿಜೆಪಿ ಸದಸ್ಯತ್ವ ಅಭಿಯಾನ -2024ಕ್ಕೆ ಮಿಸ್ ಕಾಲ್ ಸಂಖ್ಯೆಯ ಲಾಂಛನವನ್ನು ಇಲ್ಲಿನ ಅರವಿಂದ ನಗರದಲ್ಲಿರುವ ಮಹಾನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ್ನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ 3 ದಿನದ ಪಕ್ಷದ ಪದಾಧಿಕಾಗಳ ಕಾರ್ಯಾಗಾರ ನಡೆಸಲಾಗುವುದು. ರಾಜ್ಯದ 58,150 ಬೂತ್ಗಳಲ್ಲಿ ಅಭಿಯಾನದ ಕಾರ್ಯಾಗಾರ ನಡೆಯಲಿವೆ ಎಂದು ಹೇಳಿದರು.
2016 ರಲ್ಲಿ ಮಿಸ್ ಕಾಲ್ ಅಭಿಯಾನವನ್ನು ಪ್ರಾರಂಭ ಮಾಡಲಾಗಿತ್ತು. ಆಗ ದೇಶದಲ್ಲಿ 7 ಕೋಟಿ ಸದಸ್ಯರಾಗಿದ್ದರು. ಸಧ್ಯ ದೇಶದಲ್ಲಿ 18 ಕೋಟಿ ಬಿಜೆಪಿ ಸದಸ್ಯರಿದ್ದಾರೆ.ಈಗ ಮತ್ತೆ 2024 ರ ಸದಸ್ಯತ್ವ ಅಭಿಯಾನಕ್ಕೆ ಸೆಪ್ಟೆಂಬರ್ 1 ರಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಮಿಸ್ ಕಾಲ್ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಅಭಿಯಾನ ಒಟ್ಟು 45 ದಿವಸ ನಡೆಯಲಿದೆ ಎಂದು ತಿಳಿಸಿದರು.
ಕಳೆದ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 2.75 ಲಕ್ಷ ಸದಸ್ಯತ್ವ ಹೊಂದಿದ್ದರು. ಈ ಬಾರಿ 3 ಲಕ್ಷ ಸದಸ್ಯತ್ವ ಹೊಂದುವ ಗುರಿ ತಲುಪುವ ಭರವಸೆ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಬೇಕು ಎಂದು ಹೇಳಿದರು.
ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಮಹಾಪೌರ ರಾಮಣ್ಣ ಬಡಿಗೇರ, ಉಪ ಮಹಾಪೌರರಾದ ದುರ್ಗಮ್ಮಾ ಬಿಜವಾಡ, ಮಾಜಿ ಶಾಸಕ ಅಶೋಕ ಕಾಟವೆ, ಸದಸ್ಯತ್ವ ಅಭಿಯಾನದ ಸಂಚಾಲಕ ನಾರಾಯಣ ಜರತಾರಘರ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಗರಗ, ಸತೀಶ ಶೇಜವಾಡಕರ, ಮಣಿಕಂಠ ಶ್ಯಾಗೋಟಿ, ಮಾಜಿ ಮಹಾಪೌರ ವೀರಣ್ಣ ಸವಡಿ, ವಕ್ತಾರ ರವಿ ನಾಯ್್ಕ ಸಿದ್ದು ಮೊಗಲಿಶೆಟ್ಟರ ಹಾಗೂ ಇತರರು ಉಪಸ್ಥಿತರಿದ್ದರು.