ಶನಿವಾರಸಂತೆ: ಶಿಕ್ಷಣ ಇಲಾಖೆ ವತಿಯಿಂದ ಶನಿವಾರಸಂತೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮತ್ತು ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಸತ್ಯವತಿ ದೇವರಾಜ್ ಉದ್ಘಾಟಿಸಿದರು. ನಂತರ ಗ್ರಾಪಂ ಅಧ್ಯಕ್ಷತೆ ಗೀತಾ ಹರೀಶ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ಪೂರಕ ವೇದಿಕೆಯಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶನಿವಾರಸಂತೆ ಕ್ಲಸ್ಟರ್ ಮಟ್ಟದಲ್ಲಿ ವಿವಿಧ 15 ಶಾಲೆಗಳಿಂದ 2 ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸುಮಾರು 46 ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದರು.
ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಪ್ರಾಂಶುಪಾಲ ಡಾ.ಫ್ರಾನ್ಸಿಸ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಸಾಹಿತ್ಯ, ಕಲೆ, ನೃತ್ಯ ಇನ್ನು ಮುಂತಾದ ಪ್ರತಿಭೆಗಳಿರುತ್ತವೆ. ಆದರೆ ಇವನ್ನು ಅನಾವರಣ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಲ್ಲಿ ಶಾಲಾ ಕಾಲೇಜು ಹಂತದಲ್ಲಿ ತನ್ನ ಪ್ರತಿಭೆಗಳನ್ನು ವೇದಿಕೆ ಮೂಲಕ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಸತ್ಯವತಿ ದೇವರಾಜ್, ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್‌ಕುಮಾರ್ ಅವರನ್ನು ಗೌರವಿಸಲಾಯಿತು.
ಭಾರತೀ ಪ್ರೌಢಶಾಲೆ ಮುಖ್ಯಶಿಕ್ಷಕ ನರಸಿಂಹಮೂರ್ತಿ, ನಿಡ್ತ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ನಳಿನಿ, ಹಂಡ್ಲಿ ಶಾಲಾ ಮುಖ್ಯಶಿಕ್ಷಕಿ ಪುಷ್ಪಾ, ಸುಪ್ರಜ ಗುರುಕುಲ ಶಾಲೆ ಪ್ರಾಂಶುಪಾಲೆ ಡಿ.ಸುಜಲಾ ದೇವಿ, ಶಿಕ್ಷಕರಾದ ಪುಟ್ಟರಾಜು, ಕವಿತಾ, ಮಲ್ಲೇಶ್ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಮುಖ್ಯಸ್ಥ ಸಭಾಸ್ಟಿನ್ ಮೈಕಲ್ ಇನ್ನಿತರರು ಇದ್ದರು.