* ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಿರ್ಮಾಣ
* ಜನರಿಂದ ದೂರವಾದ ಕಟ್ಟಡ
* ಹುಲಿಕೆರೆ ಗುನ್ನೂರು ಗ್ರಾಪಂ, ಧಾರ್ಮಿಕ ದತ್ತಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿ
ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಸಾವಿರಾರು ರೂ. ಖರ್ಚು ಮಾಡಿ ಶೌಚಗೃಹ ಕಟ್ಟಲಾಗಿದೆ. ಆದರೆ, ಅದರ ಬಳಕೆ ಆಗದೆ ಕಟ್ಟಡ ಜನರಿಂದ ದೂರವಾಗಿದ್ದು, ಕಟ್ಟಡ ನೆಲಕಚ್ಚುವಮುನ್ನ ಬಳಕೆಗೆ ಬರುವಂತೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹೌದು .... ರಾಮನಗರ ತಾಲೂಕು ಕೈಲಾಂಚ ಹೋಬಳಿ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಹುಲಿಕೆರೆ ಗುನ್ನೂರು ಗ್ರಾಪಂನಿಂದ 2019-20ನೇ ಸಾಲಿನಲ್ಲಿ ಬೆಟ್ಟದ ಕೆಳಭಾಗದಲ್ಲಿ ಕಲ್ಯಾಣ ಮಂಟಪದ ಹಿಂದೆ ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಶೌಚಗೃಹ ನಿರ್ಮಿಸಲಾಗಿದೆ. ಸುಸಜ್ಜಿತ ಶೌಚಗೃಹ ನಿರ್ಮಾಣ ಮಾಡಿರುವ ಗ್ರಾಪಂ ಧಾರ್ಮಿಕ ದತ್ತಿ ಇಲಾಖೆಗೆ ಈ ಹಿಂದೆಯೇ ಹಸ್ತಾಂತರಿಸಿದೆ ಎನ್ನುತ್ತದೆ. ಆದರೆ, ಕಟ್ಟಡ ನಮಗೆ ಹಸ್ತಾಂತರಿಸಿದ ದಾಖಲೆ ಇಲ್ಲ, ಗುಂಡಿ ಸಮಸ್ಯೆ ಇದೆ ಸರಿಮಾಡಿಕೊಡಿ ಎಂದು ಗ್ರಾಪಂಗೆ ತಿಳಿಸಿದ್ದೇವೆ ಎನ್ನುತ್ತಾರೆ ದೇವಾಲಯದ ಅಧಿಕಾರಿಗಳು. ಕಟ್ಟಡದ ಪ್ರಾರಂಭದಲ್ಲಿ ಒಂದಷ್ಟು ದಿನ ಮಾತ್ರ ಬಳಕೆಗೆ ಬಂದಿದ್ದು, ನಂತರ ತ್ಯಾಜ್ಯ ಗುಂಡಿಯಲ್ಲಿ ಮಳೆ ನೀರು ಬಂದು ಮಣ್ಣಿನಗುಂಡಿ ಆಗಿರುವ ಕಾರಣ ಮುಚ್ಚಿಹೋಗಿದೆ ಎನ್ನುವ ಕಾರಣ ಕೇಳಿ ಬರುತ್ತಿದೆ.
ಪ್ರತಿದಿನ ಬೆಟ್ಟಕ್ಕೆ ಪ್ರವಾಸಿಗರು ಸೇರಿ ನಾಡಿನಾದ್ಯಂತ ಭಕ್ತರು ಬರುತ್ತಾರೆ. ಇವರಿಗೆ ಮೂಲಸೌಕರ್ಯ ನೀಡುವುದು ಧಾರ್ಮಿಕ ದತ್ತಿ ಇಲಾಖೆಯ ಕರ್ತವ್ಯವಾಗಿದೆ. ಇದೇ ಸ್ಥಳದ ಸ್ವಲ್ಪ ದೂರದಲ್ಲಿ ಮತ್ತೊಂದು ಶೌಚಗೃಹವಿದೆ. ಆದರೆ, ಅದು ಹಳೆಯ ಕಟ್ಟಡವಾಗಿದ್ದು, ಹೆಚ್ಚಿನ ಜನರು ಬಂದರೆ ಶೌಚಗೃಹ ಸಾಕಾಗುವುದಿಲ್ಲ, ಕ್ಯೂನಲ್ಲಿ ನಿಲ್ಲಬೇಕು ಎನ್ನುತ್ತಾರೆ ಜನರು. ಬೀಗಹಾಕಿ ನಿಂತಿರುವ ಸಮುದಾಯ ಶೌಚಗೃಹ ಕಟ್ಟಡ ಬಳಕೆಗೆ ಬಂದರೆ ಜನರಿಗೆ ಉಪಯೋಗವಾಗುತ್ತದೆ. ಇದು ಬಳಕೆಗೆ ಬರುವಂತೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಮಾಡಬೇಕಿದೆ ಎಂಬುದು ಜನರ ಒತ್ತಾಯವಾಗಿದೆ.
ಮೇ 10 ರಿಂದ 14 ರವರೆಗೆ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಇದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಬೆಟ್ಟಕ್ಕೆ ಬರುತ್ತಾರೆ. ಜತೆಗೆ ಜಾತ್ರಾ ಸಮಯದಲ್ಲಿ ಹೊರಗಿನಿಂದ ಬಂದ ಭಕ್ತರು ಬೆಟ್ಟದಲ್ಲೇ ನಾಲ್ಕೈದು ದಿನ ಉಳಿದುಕೊಳ್ಳುತ್ತಾರೆ. ಬಂದ ಜನರಿಗೆ, ಭಕ್ತರಿಗೆ ಹೆಚ್ಚಿನ ಶೌಚಗೃಹ ಬೇಕಾಗುತ್ತದೆ. ಹೀಗಾಗಿ ಸ್ಥಳೀಯ ಹುಲಿಕೆರೆ ಗುನ್ನೂರು ಗ್ರಾಪಂ ಮತ್ತು ಧಾರ್ಮಿಕ ದತ್ತಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರದ್ದಾಗಿದೆ.
ಶೌಚಗೃಹವನ್ನು ಎರಡೂ ಕಲ್ಯಾಣ ಮಂಟಪದ ಹಿಂಭಾಗ ಮಾಡಲಾಗಿದ್ದು, ಮಳೆ ಬಂದಾಗ ಕಲ್ಯಾಣ ಮಂಟಪಗಳಿಂದ ಬರುವ ನೀರು ಗುಂಡಿ ಸಮೀಪ ಹರಿಯುವ ಕಾರಣ ಗುಂಡಿಗೆ ನೀರು ತುಂಬುತ್ತದೆ. ಇದರಿಂದ ಸಮಸ್ಯೆಯಾಗಿ ಶೌಚಗೃಹ ಬಳಕೆಗೆ ಸಾಧ್ಯವಾಗದೆ ಬಾಗಿಲು ಹಾಕುವಂತಾಗಿದೆ ಎನ್ನಲಾಗಿದೆ. ಶೌಚಗೃಹ ಗುಂಡಿಗೆ ಸಿಮೆಂಟ್ ಬಳೆ ಅಥವಾ ಕಲ್ಲಿನ ಕಟ್ಟಡ ಕಟ್ಟಲಾಗಿಲ್ಲ. ಕೇವಲ ಮಣ್ಣಿನಗುಂಡಿ ಮಾಡಲಾಗಿದೆ. ಇದರಿಂದ ಮಳೆ ನೀರು ಬಂದಾಗ ಗುಂಡಿಗೆ ಮಣ್ಣು ಸೇರುತ್ತದೆ, ಇದರಿಂದ ಜನರ ಉಪಯೋಗಕ್ಕೆ ಶೌಚಗೃಹ ಇಲ್ಲದಂತಾಗಿದೆ. ಸಿಮೆಂಟ್ ಬಳೆ ಬಿಟ್ಟು ಭದ್ರತೆ ಮಾಡಿದರೆ ಮಾತ್ರ ಜನರ ಉಪಯೋಗಕ್ಕೆ ಬರುತ್ತದೆ. ಇಲ್ಲದಿದ್ದರೆ ಈಗಿರುವ ಬಾಗಿಲು ಹಾಕಿದ ಸ್ಥಿತಿಯಲ್ಲೇ ಉಪಯೋಗವಿಲ್ಲದಂತಾಗುತ್ತದೆ.
ಮುದಾಯ ಶೌಚಗೃಹ ಜನರ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ ಎಂಬುದಾಗಿ ಗ್ರಾಪಂ ಗಮನಕ್ಕೆ ಬಂದಿದೆ. ಕೂಡಲೇ ಪರಿಶೀಲನೆ ನಡೆಸಿ ಆಗಿರುವ ಸಮಸ್ಯೆ ಸರಿಪಡಿಸಿ ವೈಜ್ಞಾನಿಕ ರೀತಿಯಲ್ಲಿ ಗುಂಡಿ ನಿರ್ಮಾಣ ಮಾಡಿ ಜಾತ್ರೆಗೂ ಮುನ್ನವೇ ಜನರ ಬಳಕೆಗೆ ನೀಡಲಿದೆ.ಗಿರೀಶ್, ಗ್ರಾಪಂ ಅಧ್ಯಕ್ಷ, ಹುಲಿಕೆರೆ ಗುನ್ನೂರು ಗ್ರಾಪಂಶೌಚಗೃಹ ಕಟ್ಟಡ ಗುಂಡಿ ಸಮಸ್ಯೆ ಇರುವ ಕಾರಣ ಉಪಯೋಗಿಸುತ್ತಿಲ್ಲ. ಈಗಾಗಲೇ ಗ್ರಾಪಂ ಅಧ್ಯಕ್ಷರು, ಪಿಡಿಒ ಅವರ ಗಮನಕ್ಕೆ ಆಗಿರುವ ಗುಂಡಿ ಸಮಸ್ಯೆ ಬಗ್ಗೆ ತರಲಾಗಿದೆ. ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಜಾತ್ರಾ ಸಮಯಕ್ಕೂ ಮುನ್ನ ಬಳಕೆಗೆ ಒತ್ತು ನೀಡಲಾಗುತ್ತದೆ.ಕೆ.ಕೆ. ರಮ್ಯಾ, ಇಒ, ರೇವಣಸಿದ್ದೇಶ್ವರಬೆಟ್ಟ