ಜಿಲ್ಲೆ

ಸಿದ್ಧರಾಮರು ಮಾನವೀಯ ಮೌಲ್ಯದ ಪ್ರತೀಕ

ಸೊಲ್ಲಾಪುರ (ಚಿಕ್ಕಮಗಳೂರು ಜಿ.): ವರ್ಗ ರಹಿತ ಸಮಾಜ, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಮಾನವೀಯ ಮೌಲ್ಯ ಪ್ರತಿಪಾದನೆ ಮಾಡಿದ ಶರಣರಲ್ಲಿ ಶಿವಯೋಗಿ ಸಿದ್ಧರಾಮರು ಅಗ್ರ ಪಂಕ್ತಿಯಲ್ಲಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಆಯೋಜಿಸಿದ್ದ ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿಯಲ್ಲಿ ಕೃಷಿ ಮತ್ತು ಯುವಜನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಜಗತ್ತಿಗೆ ಸಾಮಾಜಿಕ ನ್ಯಾಯ ಸಾರಿ ಮಾರ್ಗದರ್ಶಕರಾಗಿದ್ದಾರೆ. ಮಹಿಳೆಯರಿಗೆ ಸಮಾನತೆ ನೀಡಿದವರು. ಆಧುನಿಕ ಕಾಲದಲ್ಲಿ ಸ್ತ್ರೀಯರ ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಮೂಲಕ ಯುವಜನ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ, ಶರಣರ ತತ್ವ ಆದರ್ಶ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ರೈತ ಸ್ವಾವಲಂಬಿಯಾಗಲು ಹೆಣಗಾಡುತ್ತಿದ್ದಾನೆ. ಶ್ರೇಷ್ಠತೆ ಹೊಂದಿದ್ದ ಕೃಷಿ ಇಂದು ಕನಿಷ್ಠ ಅನ್ನುವ ಮಟ್ಟಕ್ಕೆ ಕುಸಿದಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಿರುವುದೇ ಇದಕ್ಕೆ ಕಾರಣ. ಕೃಷಿ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಲಾಭ ಕೊಡಬೇಕೆನ್ನುವ ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನೆಲ, ಜಲ ಸಂಸ್ಕೃತಿ ಬಿಂಬಿಸುವ ಕೃಷಿ ಹೆಚ್ಚು ಜನರಿಗೆ ಇಂದಿಗೂ ಉದ್ಯೋಗ ನೀಡಿದೆ. ಕೃಷಿಕರಿಗೆ ಧಾರಾಳತನ ಹೆಚ್ಚಾಗಿದ್ದು, ಹಸಿದನವನಿಗೆ ಈಗಲೂ ಅನ್ನ ನೀಡುವ ಒಳ್ಳೆಯ ಗುಣ ಕೃಷಿಕರಿಗಿದೆ. ಕೆರೆ ಕಟ್ಟೆ ಉಳಿಸಿಕೊಂಡು ಅಂತರ್ಜಲ ಹೆಚ್ಚಿಸಬೇಕಾಗಿದೆ ಎಂದರು.

ಉಚಿತ ನೀರಾವರಿ ಸೌಲಭ್ಯ ಕಲ್ಪಿಸಿ: ತೆಲಂಗಾಣ ಮಾದರಿಯಲ್ಲಿ ರಾಜ್ಯದ ರೈತರಿಗೂ ಉಚಿತ ನೀರಾವರಿ ಹಾಗೂ ವಿದ್ಯುತ್ ಸೌಲಭ್ಯ ನೀಡಿದರೆ ಯಾವ ಸಹಾಯಧನದ ಅವಶ್ಯಕತೆ ಇಲ್ಲ ಎಂದು ಬಾಗಲಕೋಟೆ ಕೃಷಿ ವಿವಿ ಕುಲಪತಿ ಡಾ. ಕೆ.ಎಂ.ಇಂದ್ರೇಶ್ ಹೇಳಿದರು. ಸಿದ್ಧರಾಮೇಶ್ವರ ಜಯಂತ್ಯುತ್ಸವದ ಕೃಷಿ ಮತ್ತು ಯವಜನಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ತೆಲಂಗಾಣ ರಾಜ್ಯದಲ್ಲಿ ಶೇ.70 ರೈತರಿಗೆ ಹನಿ ನೀರಾವರಿ ಹಾಗೂ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಅಲ್ಲಿನ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ನಾಲ್ಕು ಪಟ್ಟು ಆದಾಯ ಹೆಚ್ಚಿಸಿಕೊಂಡಿದ್ದಾರೆ ಎಂದರು. ನಮ್ಮ ರಾಜ್ಯದಲ್ಲಿಯೂ ತೋಟಗಾರಿಕೆ ಬೆಳೆಗೆ ವಿಪುಲ ಅವಕಾಶವಿದೆ. ಇಲ್ಲಿನ ರೈತರಿಗೆ ಹನಿ ನೀರಾವರಿ ಪದ್ಧತಿಯ ಬೃಹತ್​ಯೊಜನೆ ಉಚಿತವಾಗಿ ನೀಡಬೇಕು. ಇದರಿಂದ ಕೃಷಿಕರ ಆದಾಯ ಹೆಚ್ಚುವುದಲ್ಲದೆ, ಕೃಷಿ ಆಧಾರಿತ ಕೈಗಾರಿಕೆಗಳು ಹೆಚ್ಚಾಗುತ್ತವೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗವೂ ಸಿಗಲಿದೆ ಎಂದು ಹೇಳಿದರು.

ವಿ.ಉಮೇಶ್, ಎಸ್.ಎಸ್.ಬಸವರಾಜ್, ಡಾ. ಕೆ.ಹರೀಶ್, ಡಾ. ವಿನಯ್ ರಾಜು, ಡಾ. ಕೆ.ಎಲ್.ಪ್ರಸನ್ನ, ಡಾ.ಎಂ.ಎನ್. ಅಶೋಕ್, ಎಚ್.ಎಂ.ಓಂಕಾರಸ್ವಾಮಿ, ಎಚ್.ಎಂ.ವಿಶ್ವನಾಥಾರಾಧ್ಯ, ಬಿ.ಎಲ್.ಮೂರ್ತಯ್ಯ, ಜೋಗೇಗೌಡರು, ಬಿ.ಕೆ.ಪರಮೇಶ್ವರಪ್ಪ, ಕೆ.ವಿರೂಪಾಕ್ಷಪ್ಪ, ಈಶ್ವರಯ್ಯ ಅವರನ್ನು ಸನ್ಮಾನಿಸಲಾಯಿತು.

ನಂದಿಗುಡಿ ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜಯಚಂದ್ರಶೇಖರ್ ಸ್ವಾಮೀಜಿ, ಡಾ ಶ್ರೀ ಶಾಂತವೀರ ಮಹಾಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಶಿರಾ ಡಿವೈಎಸ್ಪಿ ಕುಮಾರಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಲೋಕೇಶ್, ಲಿಂಗರಾಜು, ಸಿಪಿಐ ನವೀನ್ ಇದ್ದರು.