ತುಮಕೂರು: ಜಾತಿರಹಿತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆ. ಆದರೆ, ಇವತ್ತಿಗೂ ಅಸ್ಪೃಶ್ಯತೆ ಜೀವಂತವಾಗಿದ್ದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಸಮಾನತೆ ಸಮಾಜದಲ್ಲಿರುವುದು ಬೇಸರದ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕುರುಬ ಸಾಂಸ್ಕೃತಿಕ ಪರಿಷತ್ ವತಿಯಿಂದ ಆಯೋಜಿಸಿರುವ 2 ದಿನಗಳ ಕುರುಬ ಸಾಹಿತ್ಯ- ಸಾಂಸ್ಕೃತಿಕ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮನುಸ್ಮೃತಿ ಯಿಂದಾಗಿ ನಮ್ಮಲ್ಲಿ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಈ ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಯಿತು. ಇದನ್ನು ತೊಡೆದುಹಾಕಲು ಎಲ್ಲರೂ ಶಿಕ್ಷಣ ಪಡೆದಿದ್ದ ಕಾರಣವಾಯಿತು ಎಂದರು.
ಜಾತಿಗೆ ಚಲನೆ ಇಲ್ಲ. ವರ್ಗಕ್ಕೆ ಚಲನೆ ಇದೆ. ನಾನು ಯಾವ ಜಾತಿಯಲ್ಲಿ ಹುಟ್ಟಿರುತ್ತೇನೋ ಸಾಯೋವರೆಗೆ ಅದೇ ಜಾತಿಯಲ್ಲಿರುತ್ತೇನೆ. ಬಡವ ಶ್ರೀಮಂತನಾಗಬಹುದು, ಆದರೆ, ದಲಿತ ಬ್ರಾಹ್ಮಣನಾಗಲಿಕ್ಕೆ ಸಾಧ್ಯನಾ? ನಮ್ಮ ಜಾತಿ ವ್ಯವಸ್ಥೆ ನಿಂತ ನೀರಿದ್ದಂಗೆ. ಅದಕ್ಕೆ ಚಲನೆ ಇಲ್ಲ. ಆರ್ಥಿಕ ಚಟುವಟಿಕೆಗಳು ಪ್ರತಿ ಜಾತಿನಲ್ಲು ಬರಬೇಕು. ಈ ಚಲನೆ ಸಿಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ಬಂದಲ್ಲಿ ಜಾತ್ಯಾತಿತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕರ್ಮ ಸಿದ್ಧಾಂತ ತಿರಸ್ಕರಿಸಿದ್ದ ಬಸವಣ್ಣ: ನಮ್ಮ ಯೋಚನೆಗಳು ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು. ನಮ್ಮ ಜ್ಞಾನ ತಿಳಿವಳಿಕೆಯಲ್ಲಿ ಸ್ಪಷ್ಟತೆ ಇರಬೇಕು. ಕರ್ಮ ಸಿದ್ಧಾಂತವನ್ನು ಧಿಕ್ಕರಿಸುವ ವೈಜ್ಞಾನಿಕ, ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಗುಲಾಮಗಿರಿಯಿಂದ ಹೊರಬರಲು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಅಲ್ಲದೆ, ಸತ್ಯ ಹೇಳುವ ಛಾತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಲೇ ಬಂದಿದ್ದಾರೆ. ಅದಕ್ಕೆ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ನಿಮ್ಮ ಮನೆಯಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದಾರೋ ಗೊತ್ತಿಲ್ಲ. ಕಾಯಕ, ದಾಸೋಹ ಬಸವಣ್ಣವರ ತತ್ವ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಅಡ್ಡಿ ಆತಂಕಗಳು ಬರುತ್ತಲೇ ಇರುತ್ತವೇ. ಹಾಗಾಗಿ ಪ್ರಗತಿಪರ ವಿಚಾರಗಳ ಜತೆ ನೀವು ಸದಾ ಗಟ್ಟಿಯಾಗಿ ನಿಲ್ಲಲೇಕು. ಪ್ರಗತಿಪರ ವಿಚಾರಗಳ ಜತೆಗೆ ನಾವು ನಿಲ್ಲದೆ ಹೋದರೆ ಸಮಸಮಾಜ ನಿರ್ಮಾಣ ಕನಸು ಸಾಧ್ಯವಿಲ್ಲ ಎಂದರು.
ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲವೋ ಅಲ್ಲಿವರೆಗೆ ಸಮಾನತೆ ಸಿಕ್ಕಿಲ್ಲ. ಖರೀದಿಸುವ ಶಕ್ತಿ ಎಲ್ಲರಿಗೂ ಸಿಗಬೇಕು ಎಂಬ ಕಾರಣಕ್ಕೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದೆ. ಆದರೆ, ಕೆಲವು ಪಟ್ಟಭದ್ರಹಿತಾಸಕ್ತಿಗಳು ಇದನ್ನು ವಿರೋಧಿಸಿದವು. ಆರ್ಥಿಕ, ಸಾಮಾಜಿಕ ಶಕ್ತಿ ಬಂದರೆ ಸಮಾನತೆ ಮೂಡಲಿದೆ ಎಂದರು.
ಅಹಿಂದ ಸಮಾಜ ಮತ್ತು ಎಲ್ಲಾ ಜಾತಿ ಧರ್ಮಗಳ ಬಡತನ, ಹಸಿವು ನಿವಾರಣೆ ಆಗಬೇಕು. ಅನ್ನಕ್ಕಾಗಿ ಯಾರೂ ಇನ್ನೊಬ್ಬರ ಮನೆಬಾಗಿಲಿಗೆ ಹೋಗಿ ನಿಲ್ಲಬಾರದು ಎನ್ನುವ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ. ಸಂಕಟ, ನೋವುಗಳ ಅನುಭವಗಳಾಗಿದ್ದರೆ ಸಾಹಿತ್ಯ ಕಟ್ಟಿಕೊಡಲು ಸಾಧ್ಯ. ಪಟ್ಟಭದ್ರರಿಂದ ಸಾಹಿತ್ಯ ನಿರೀಕ್ಷಿಸಲು ಸಾಧ್ಯವೇ? ಹಾಗಾಗಿ, ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ರಾಜ್ಯ ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಪತ್ರಿಕೋದ್ಯಮಿ ಎಸ್.ನಾಗಣ್ಣ, ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಡಾ.ರಮಣ್ ಹುಲಿನಾಯ್ಕರ್, ಇನ್ ಸೈಟ್ ಸಂಸ್ಥೆಯ ಜಿ.ಬಿ.ವಿನಯಕುಮಾರ್ ಉಪಸ್ಥಿತರಿದ್ದರು.