ಮೈಸೂರು ನಗರದ ಪುರಭವನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಗೌತಮ ಬುದ್ಧ, ಮಹಿಷಾ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಪುರುಷೋತ್ತಮ್, ವಿಠ್ಠಲ್ ವಗ್ಗನ್, ಪ್ರೊ.ಕೆ.ಎಸ್. ಭಗವಾನ್, ಪ್ರೊ.ನಂಜರಾಜೇ ಅರಸ್ ಹಾಗೂ ಇತರರು ಇದ್ದರು.  
ಜಿಲ್ಲೆ

Untitled Oct 10, 2026 08:50 pm

ಮೈಸೂರು: ಮಹಿಷ ಮಂಡಲೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಪುರಭವನ ಆವರಣದಲ್ಲಿ ಶನಿವಾರ ಮಹಿಷ ಮಂಡಲೋತ್ಸವ ಆಚರಿಸಲಾಯಿತು. ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಪುರಭವನ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಂದು ಧರ್ಮದ ಆಚರಣೆಗೆ ಅವಕಾಶ ನೀಡಿದೆ. ಅದೇ ರೀತಿ ಮಹಿಷ ಮಂಡಲೋತ್ಸವ ಆಚರಣೆಗೆ ಯವುದೇ ನಿರ್ಬಂಧ ಹೇರದೆ ಅವಕಾಶ ನೀಡಬೇಕಿತ್ತು. ಆದರೆ 144 ಸೆಕ್ಷನ್ ಹಾಕುವ ಮೂಲಕ ನಮ್ಮ ಆಚರಣೆಗೆ ಅಡ್ಡಿಪಡಿಸಿದರು. ಆದರೆ, ಗೃಹ ಸಚಿವರ ಸೂಚನೆ ಮೇರೆಗೆ 144 ಸೆಕ್ಷನ್ ಸಡಿಲಗೊಳಿಸಿ ನಮಗೆ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ನೀಡಿದ್ದು ಸಂತಸ ತಂದಿದೆ. ನಮ್ಮ ಆಚಾರ ವಿಚಾರ ಅಡ್ಡಿಪಡಿಸಲು ನೀವು ಯಾರು? ಮುಂದಿನ ವರ್ಷ ದಸರಾ ಸಂದರ್ಭದಲ್ಲಿ ಮಹಿಷಾಸುರ ಪ್ರತಿಮೆಗೆ ದಸರಾ ಸಮಿತಿಯಿಂದ ಅಲಂಕಾರ ಮಾಡಬೇಕು. ಇಲ್ಲವಾದಲ್ಲಿ ನಾವೇ ಅಲಂಕಾರ ಮಾಡುತ್ತೇವೆ ಎಂದರು.

ಚಿಂತಕ ವಿಠ್ಠಲ್ ವಗ್ಗನ್ ಮಾತನಾಡಿ, ನಾವು ಚರಿತ್ರೆ ಹೇಳಲು ಯಾರಿಗೂ ಹೆದರಬೇಕಿಲ್ಲ. ಏಕೆಂದರೆ ನಮ್ಮೊಂದಿಗೆ ಸಂವಿಧಾನ ಇದೆ. ಆದರೆ ಬಹುತೇಕರು ಸಂವಿಧಾನ ಓದಿಕೊಂಡಿಲ್ಲ. ಸಂವಿಧಾನದ ಅರಿವು ಇದ್ದರೆ ನಾವು ಮಾತನಾಡಲು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಮಹಿಷಾ ಪದದ ಮೂಲ ಅರ್ಥವನ್ನು ಎಲ್ಲರು ತಿಳಿದುಕೊಳ್ಳಬೇಕು. ಪಾಲಿ ಭಾಷೆಯಲ್ಲಿ ಮಹಿ ಮತ್ತು ಈಶ ಸೇರಿ ಮಹಿಷಾ ಆಗಿದೆ. ಮಹಿ ಎಂದರೆ ಭೂಮಿ, ಈಶ ಎಂದರೆ ಒಡೆಯ ಎಂದರ್ಥ. ಮಹಿಷಾಸುರ ಎಂದರೆ ಈ ಭೂಮಿಯನ್ನು ಆಳ್ವಿಕೆ ನಡೆಸಿದ ಪರಾಕ್ರಮಿ ಅರಸ ಎಂದರ್ಥ ಎಂದರು.

ಮಹಿಷಾ ಕೇವಲ ಮೈಸೂರಿಗೆ ಸೀಮಿತವಾದ ರಾಜನಲ್ಲ. ದೇಶದ ಉದ್ದಲಗಕ್ಕೂ ಶಾಸನಗಳು, ಪುರಾತತ್ವ ಇಲಾಖೆಯ ದಾಖಲೆಗಳು ಮತ್ತು ಇತಿಹಾಸದ ಪುಟದಲ್ಲಿ ಆತನ ಕುರುಹುಗಳಿವೆ. ಯುವ ಸಮೂಹ ದೇಶದ ಇತಿಹಾಸವನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿ ಸತ್ಯಾಸತ್ಯತೆಗಳನ್ನು ಅರಿಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಚಾಮುಂಡಿ ಕಾಲ್ಪನಿಕ ಪುರಾಣ, ಮಹಿಷಾ ಇತಿಹಾಸದ ವ್ಯಕ್ತಿ. ಪ್ರಸ್ತುತ ಕಾಲ್ಪನಿಕ ಕಥನಗಳೇ ದೊಡ್ಡದಾಗಿ ಕಾಣಿಸುತ್ತಿದ್ದು, ದೇಶದ ನೈಜ ಇತಿಹಾಸದ ಕುರಿತು ಯುವ ಸಮೂಹ ಹೊಸ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಇತಿಹಾಸತಜ್ಞ ಪ್ರೊ.ನಂಜರಾಜೇ ಅರಸ್, ದಲಿತ ಮುಖಂಡರಾದ ಸಿದ್ದರಾಜು, ಮಣಿಯಯ್ಯ ಭೂಗತಗಳ್ಳಿ, ದಸಂಸ ಜಿಲ್ಲಾ ಸಂಚಾಲಕ ಮೆಲ್ಲಹಳ್ಳಿ ನಾರಾಯಣ, ಭರತ್ ರಾಮಸ್ವಾಮಿ, ಚಿಕ್ಕಅಂದಾನಿ, ಅಹಿಂದ ಜವರಪ್ಪ, ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ ಹಾಗೂ ಇತರರು ಇದ್ದರು.

ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ

ಮಹಿಷ ಮಂಡಲೋತ್ಸವ ಕಾರ್ಯಕ್ರಮಕ್ಕೆ ಪರ-ವಿರೋಧದ ಅಭಿಪ್ರಾಯ ಇರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೆ, ಗೃಹಸಚಿವ ಪ್ರಿಯಾಂಕ್ ಖರ್ಗೆ ಸೂಚನೆಯ ಮೇರೆಗೆ ಮಹಿಷ ಮಂಡಲೋತ್ಸವ ಆಚರಣಾ ಸಮಿತಿಯ 20 ಪದಾಧಿಕಾರಿಗಳಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮೇಣದಬತ್ತಿ ಬೆಳಗಲು ಅವಕಾಶ ನೀಡಲಾಯಿತು.

ಮೈಸೂರಿನಲ್ಲಿರುವುದು ‘ಯಶ್ ಮಹಿಷಾ’

ಮಹಿಷಾ ದೇಶದ ಉದ್ದಗಲಕ್ಕೂ ಆಳ್ವಿಕೆ ನಡೆಸಿದ್ದಾನೆ. ವಿವಿಧೆಡೆ ಮಹಿಷಾಸುರನನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ. ಒಡಿಶಾದಲ್ಲಿ ಖಾರಮೇಲ ಮಹಿಷಾ, ತೆಲಂಗಾಣದಲ್ಲಿ ಮನ ಮಹಿಷಾ ಎಂದು ಕರೆಯಲಾಗುತ್ತದೆ. ಮೈಸೂರಿನಲ್ಲಿರುವ ಮಹಿಷಾನ ಹೆಸರು ‘ಯಶ್ ಮಹಿಷಾ’ ಎಂದು ಚಿಂತಕ ವಿಠ್ಠಲ್ ವಗ್ಗನ್ ಹೇಳಿದರು.

ಮಹಿಷಾಸುರ ಪ್ರತಿಮೆ ಮೈಸೂರಿನಲ್ಲಿ ಮಾತ್ರವಲ್ಲ ಕೋಲಾರದ ಕೆಜಿಎಫ್‌ನಲ್ಲಿ, ಹುಬ್ಬಳ್ಳಿಯ ಕೋಳಿವಾಡ, ಬೀದರ್‌ನ ಮಾಳೇಗಾವ್ ಗ್ರಾಮದಲ್ಲಿ ಮಹಿಷಾಸುರ ಪ್ರತಿಮೆ ಇದೆ. ಛತ್ತೀಸ್‌ಗಢ, ಜಾರ್ಖಂಡ್‌ದಲ್ಲಿ ಮಹಿಷಾ ಪ್ರತಿಮೆ ಇದೆ. ಉಡುಪಿಯ ಬಾರುಕೂರು ಗ್ರಾಮದಲ್ಲಿ ಮಹಿಷಾ ಮಂದಿರ ಇದೆ. ದೇಶದ ಸಾವಿರಾರು ಕಡೆಗಳಲ್ಲಿ ಮಹಿಷಾನ ಪ್ರತಿಮೆ ರಾರಾಜಿಸುತ್ತಿದೆ. ಮಹಿಷಾ ಕೆಟ್ಟವನಾಗಿದ್ದರೆ ಸಾವಿರಾರು ಪ್ರತಿಮೆಗಳು ಏತಕ್ಕೆ ನಿರ್ಮಾಣ ಮಾಡಲಾಯಿತು ಎಂದು ಪ್ರಶ್ನಿಸಿದರು.