ಎ ಗುಂಡ್ಲುಪೇಟೆ ಪಟ್ಟಣದ ಪಶುಸಂಗೋಪನಾ ಇಲಾಖೆಯ ಕಚೇರಿ ಎದುರು ಸಂಚಾರಿ ಪಶುಚಿಕಿತ್ಸಾ ವಾಹನ ತುಕ್ಕುಹಿಡಿಯುತ್ತ ನಿಂತಿದೆ. 
ಜಿಲ್ಲೆ

ಜಾನುವಾರುಗಳಿಗೆ ಸಕಾಲದಲ್ಲಿ ದೊರೆಯದ ಚಿಕಿತ್ಸೆ

ಗುಂಡ್ಲುಪೇಟೆ: ಪಶುಪಾಲನಾ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಗ್ರಾಮಾಂತರ ಪ್ರದೇಶದಲ್ಲಿನ ಜಾನುವಾರುಗಳಿಗೆ ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ದೊರಕದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಸುಮಾರು 22 ಪಶು ಆಸ್ಪತ್ರೆಗಳಿದ್ದರೂ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆರು ಇನ್ಸ್‌ಪೆಕ್ಟರ್‌ಗಳು ಹಾಗೂ 12 ಗ್ರೂಪ್ ಡಿ ನೌಕರರು ಮಾತ್ರ ಇದ್ದಾರೆ. ಪಟ್ಟಣ, ಬೇಗೂರು ಹಾಗೂ ಹಂಗಳ ಗ್ರಾಮಗಳ ಪಶು ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಇನ್ಸ್‌ಪೆಕ್ಟರುಗಳೇ ನೋಡಿಕೊಳ್ಳಬೇಕಾಗಿದ್ದು ಒಬ್ಬೊಬ್ಬರಿಗೆ ಮೂರರಿಂದ ನಾಲ್ಕು ಆಸ್ಪತ್ರೆಗಳ ಉಸ್ತುವಾರಿ ನೀಡಲಾಗಿದೆ.

ಕುಂದಕೆರೆ, ಬೊಮ್ಮಲಾಪುರ, ಕಬ್ಬಹಳ್ಳಿ, ಬರಗಿ, ಆಲತ್ತೂರು, ತೆರಕಣಾಂಬಿ, ಹೊರೆಯಾಲ ಮುಂತಾದ ಕಾಡಂಚಿನ ಆಸ್ಪತ್ರೆಗಳಿಗೆ ವೈದ್ಯರೇ ಇಲ್ಲದಂತಾಗಿದೆ. ಅಲ್ಲದೆ ಎಲ್ಲ ಆಸ್ಪತ್ರೆಗಳಲ್ಲಿಯೂ ಡಿ ಗ್ರೂಪ್ ನೌಕರರೇ ಪಶುಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. ವೈದ್ಯರು ಹಾಗೂ ಸಿಬ್ಬಂದಿಯಿಲ್ಲದೆ ಗ್ರಾಮಾಂತರ ಪ್ರದೇಶಗಳ ರೈತರ ಸಾಕುಪ್ರಾಣಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದಂತಾಗಿದೆ. ಇದರಿಂದ ಜಾನುವಾರುಗಳು ಮೃತಪಡುತ್ತಿವೆ.

ಕೇರಳ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಈ ತಾಲೂಕು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿದೆ. ನೆರೆ ರಾಜ್ಯಗಳಲ್ಲಿ ಜನ ಮತ್ತು ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಯಾವುದೇ ಸೋಂಕು ತಾಲೂಕಿಗೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಬೇಕಾಗಿದೆ. ಮೂರು ವರ್ಷಗಳ ಹಿಂದೆ ಕಾಣಿಸಿಕೊಂಡ ಕರೊನಾ, ಕೋಳಿ ಜ್ವರ, ಇತ್ತೀಚೆಗೆ ನೆರೆಯ ಕೇರಳದಲ್ಲಿ ಕಾಣಿಸಿಕೊಂಡ ಹಂದಿಜ್ವರದ ಸಂದರ್ಭದಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣಾ ಕೇಂದ್ರ ತೆರೆದು ಸಿಬ್ಬಂದಿ ನಿಯೋಜಿಸಿ ಹದ್ದಿನ ಕಣ್ಣಿಡಲಾಗಿತ್ತು. ಅಲ್ಲದೆ ಪ್ರತಿ ವರ್ಷವೂ ಮಳೆಗಾಲದಲ್ಲಿ ತಾಲೂಕಿನ ಜಾನುವಾರುಗಳನ್ನು ಕಾಡುವ ಕಾಲುಬಾಯಿ ಜ್ವರ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ಲಸಿಕೆ ಹಾಕುವುದು ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ.

ನಿಂತಲ್ಲೇ ತುಕ್ಕು ಹಿಡಿಯುತ್ತಿರುವ ಸಂಚಾರಿ ವಾಹನ: ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳ ಸಾಕುಪ್ರಾಣಿಗಳಿಗೆ ತುರ್ತುಚಿಕಿತ್ಸೆ ನೀಡುವ ಸಲುವಾಗಿ ಪ್ರತಿ ತಾಲೂಕಿಗೂ ಒಂದು ಸಂಚಾರಿ ಪಶು ತುರ್ತು ಚಿಕಿತ್ಸಾ ವಾಹನ ನೀಡಿದೆ. 108 ಮಾದರಿಯಲ್ಲಿ ಇದರ ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಏಜೆನ್ಸಿ ನೀಡಿದೆ. ಪ್ರತಿ ವಾಹನಕ್ಕೆ ಒಬ್ಬರು ತರಬೇತಿ ಪಡೆದ ವಶುವೈದ್ಯರು, ಚಾಲಕರು ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆಗೊಂಡಿದ್ದರೂ ರಾಜ್ಯದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ಈ ವಾಹನವನ್ನು ಪಶು ಸಂಗೋಪನಾ ಇಲಾಖೆಯ ವಶಕ್ಕೆ ನೀಡಿ ನಾಲ್ಕು ತಿಂಗಳಾದರೂ ಇದಕ್ಕೆ ಅಗತ್ಯ ಸವಲತ್ತು ಒದಗಿಸಿಲ್ಲ. ಅಲ್ಲದೆ ಅಗತ್ಯವಾಗಿ ಔಷಧಗಳನ್ನು ಸರಬರಾಜು ಮಾಡದ ಪರಿಣಾಮ ವಾಹನವು ಆಸ್ಪತ್ರೆಯ ಮುಂದೆ ಬಿಸಿಲು, ಮಳೆಗೆ ತುಕ್ಕು ಹಿಡಿಯುತ್ತ ನಿಂತಿದೆ.

ಪಶು ಆಸ್ಪತ್ರೆಗಳಲ್ಲಿ ಪಶುವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಪ್ರತಿ ದಿನವೂ ವನ್ಯಜೀವಿಗಳ ದಾಳಿಯಿಂದ ಸಾಕುಪ್ರಾಣಿಗಳು ಗಾಯಗೊಳ್ಳುತ್ತಿವೆ. ಸಕಾಲದಲ್ಲಿ ಚಿಕಿತ್ಸೆ ದೊರಕಿದರೆ ಅವುಗಳ ಜೀವ ಉಳಿಸಿಕೊಳ್ಳಲು ಸಾಧ್ಯವಿದೆ. ಆದ್ದರಿಂದ ಸರ್ಕಾರ ಗ್ರಾಮಾಂತರ ಪ್ರದೇಶಗಳ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು.
ಸಂಪತ್ತು, ಕುಂದಕೆರೆ ಗ್ರಾಮಸ್ಥ

ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಪಶುವೈದ್ಯರು ವರ್ಗಾವಣೆ ಹಾಗೂ ನಿವೃತ್ತಿ ಹೊಂದಿದ್ದರಿಂದ ಕೊರತೆ ಉಂಟಾಗಿದೆ. ಇದರಿಂದಾಗಿ ಜಾನುವಾರುಗಳಿಗೆ ಸಮರ್ಪಕ ಸೇವೆ ಒದಗಿಸಲಾಗುತ್ತಿಲ್ಲ. ಸಂಚಾರಿ ವಾಹನವನ್ನು ಏಜೆನ್ಸಿ ಮೂಲಕ ನಿರ್ಹವಣೆ ಮಾಡಲಾಗುತ್ತಿದ್ದು ಸಹಾಯವಾಣಿಗೆ ಕರೆ ಮಾಡಿದರೆ 108 ಮಾದರಿಯಲ್ಲಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ.
ಡಾ.ಮೋಹನ್‌ಕುಮಾರ್ ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ, ಗುಂಡ್ಲುಪೇಟೆ