ವಿಜಯಪುರ: ಪಟ್ಟಣದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸಿ ಬಳಸಿಕೊಳ್ಳುವಲ್ಲಿ ಪುರಸಭಾ ಆಡಳಿತ ವಿಫಲವಾಗಿದ್ದು, ಸಂಗ್ರಹಿಸಿದ ಕಸವನ್ನು ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಗುಡ್ಡೆಹಾಕಿ ಕಸಕ್ಕೆ ಬೆಂಕಿ ಇಡಲಾಗುತ್ತಿದೆ.
ಈ ಹಿಂದೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಸ ಸಂಗ್ರಹಣಾ ಕಂಟೇನರ್ ಇಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅವುಗಳನ್ನೆಲ್ಲ ತೆರವು ಮಾಡಲಾಗಿದೆ. ಕಸ ಸಂಗ್ರಹಣೆಗೆ ಬರುವ ಆಟೋಗಳಿಂದ ಸಂಗ್ರಹಿಸಿದ ಕಸವನ್ನು ವಿಲೇವಾರಿ ಸ್ಥಳಕ್ಕೆ ಸಾಗಿಸಿ ವೈಜ್ಞಾನಿಕವಾಗಿ ವಿಲೇ ಮಾಡಬೇಕು. ಆದರೆ ಕಸವನ್ನು ರಸ್ತೆಬದಿಗಳಲ್ಲಿಯೇ ಹಾಕಿ, ಬೆಂಕಿ ಹಾಕಲಾಗುತ್ತಿದೆ.
ಈ ಹಿಂದೆಯೂ ಲಕ್ಷಾಂತರ ರೂ.ವ್ಯಯಿಸಿ ಅಳವಡಿಸಿದ್ದ ಕಸದ ಕಂಟೇನರ್‌ಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿ, ಕಸ ವಿಲೇಯಲ್ಲಿ ಪುರಸಭೆ ಸಂಪೂರ್ಣ ವಿಲವಾಗಿದೆ.
ಕಾಯಿಲೆಗಳಿಗೆ ಆಹ್ವಾನ: ಕಸವಿಲೇ ಮಾಡಲು ಜಾಗವಿಲ್ಲದ್ದರಿಂದ ಸಂಗ್ರಹಿಸುವ ತ್ಯಾಜ್ಯ ಪೇಪರ್, ಪ್ಲಾಸ್ಟಿಕ್, ರಾಸಾಯನಿಕ ಹೊಂದಿರುವ ಎಲ್ಲ ವಸ್ತುಗಳನ್ನು ಸುಡುವುದರಿಂದ ವಾಯುಮಾಲಿನ್ಯವುಂಟಾಗುತ್ತಿದೆ. ವಿಷಕಾರಿ ಅನಿಲ ಬಿಡುಗಡೆಯಿಂದ ಸುತ್ತಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಪುರಸಭೆಯ ಅಧಿಕಾರಿಗಳು ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲು ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಒಕ್ಕಲಿಗರ ಬೀದಿಯಲ್ಲಿರುವ ಘನತ್ಯಾಜ್ಯವಸ್ತುಗಳ ವಿಂಗಡಣಾ ಘಟಕದ ಮುಂಭಾಗದಲ್ಲಿಯೇ ಕಸವನ್ನು ರಾಶಿ ಹಾಕಿ ಸುಡಲಾಗುತ್ತಿದೆ. ಪಟ್ಟಣದ 5ನೇ ವಾರ್ಡಿನ ದೊಡ್ಡಮೋರಿ ಬಳಿ ಕಸ ಹಾಕಲಾಗುತ್ತಿದೆ. ಪಟ್ಟಣದ ಬೇರೆ ಕಡೆಯಿಂದಲೂ ತಂದು ಅಲ್ಲಿ ಸುರಿಯಲಾಗುತ್ತಿದೆ. ಅದೇ ರಸ್ತೆಯಲ್ಲಿ ಅರಳೇಪೇಟೆ, ಯಲ್ಲಮ್ಮದೇವಿ ದೇವಾಲಯದ ಕಡೆಗೆ ಜನರು ಓಡಾಡುವುದರಿಂದ ತೊಂದರೆಯಾಗಿದೆ. ಸುತ್ತಮುತ್ತಲೂ ವಾಸದ ಮನೆಗಳಿದ್ದು ಹೊಗೆಯಿಂದ ಕೆಟ್ಟ ವಾಸನೆ ಬರುವುದಲ್ಲದೇ, ಕಸದ ಗುಡ್ಡೆಯನ್ನು ನಾಯಿಗಳು ಎಳೆದಾಡುವುದರಿಂದ ಅನೈರ್ಮಲ್ಯ ಉಂಟಾಗುತ್ತಿದೆ.
ಅವೈಜ್ಞಾನಿಕ ವಿಲೇವಾರಿ: ಪಟ್ಟಣದಲ್ಲಿ ಸಂಗ್ರಹಿಸಿದ ಕಸವನ್ನು ಜಂಗ್ಲಿಪೀರ್‌ಬಾಬಾ ದರ್ಗಾ ಎದುರಿರುವ ಹಳೆಯ ಬಾವಿ, ಚಂದೇನಹಳ್ಳಿ ಗೇಟ್ ಬಳಿಯಲ್ಲಿರುವ ಬಾವಿಗಳಲ್ಲಿ ಸುರಿಯಲಾಗುತ್ತಿದೆ. ಕಸಸಂಗ್ರಹಣಾ ಲಾರಿಗಳಿಂದ ಕಸವನ್ನು ಬಾವಿಗೆ ಸುರಿಯುವಾಗ ಅರ್ಧಕಸ ಹೊರಗೇ ಬೀಳುತ್ತದೆ. ಮಳೆಬಂದಾಗ ಬಾವಿಯಲ್ಲಿನ ಕಸವು ಕೊಳೆಯುವುದರಿಂದ ಬೆಂಗಳೂರು ಮುಖ್ಯರಸ್ತೆಯಲ್ಲಿ ಓಡಾಡಲಾಗದಷ್ಟು ದುರ್ವಾಸನೆ ಬರುತ್ತದೆ ಎನ್ನುತ್ತಾರೆ ಸ್ಥಳೀಯರು.
ಕಿಡಿಗೇಡಿಗಳು ಕಸಕ್ಕೆ ಬೆಂಕಿ ಹಾಕಿದ್ದು, ಈ ಕೃತ್ಯ ಎಸಗುವವರ ಬಗ್ಗೆ ಪುರಸಭೆ ಗಮನ ಸೆಳೆದರೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಪ್ರದೀಪ್ ಕುಮಾರ್ ಎ.ಬಿ. ಮುಖ್ಯಾಧಿಕಾರಿ