ಜಿಲ್ಲೆ

ಗುಂಡಿಬೈಲು ರಸ್ತೆಯಲ್ಲಿ ಅವೈಜ್ಞಾನಿಕ ಯೂಟರ್ನ್

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಲ್ಸಂಕ-ಅಂಬಾಗಿಲು ಚತುಷ್ಪಥ ರಸ್ತೆಯೋ ಮನೆಯಂಗಳೋ ಎನ್ನುವುದನ್ನು ನಗರಸಭೆಯೇ ಹೇಳಬೇಕು. ಮನಸೋಇಚ್ಛೆ ರಸ್ತೆ ವಿಭಾಜಕ ತುಂಡರಿಸಿ ಅವೈಜ್ಞಾನಿಕವಾಗಿ ಯೂ&ರ್ಟನ್​ ನೀಡಿರುವುದರಿಂದ ಗುಂಡಿಬೈಲು ಪ್ರದೇಶವೇ ಅಪಘಾತವಲಯವಾಗಿ ಪರಿವರ್ತನೆಗೊಂಡಿದೆ.

ಅಂಬಾಗಿಲು-&ಕಲ್ಸಂಕ ಸಂಪರ್ಕಿಸುವ ರಸ್ತೆಯಲ್ಲಿ ಬಹಳಷ್ಟು ವಾಹನಗಳು ಸಂಚರಿಸುತ್ತಿದ್ದು, ಕಲ್ಸಂಕದಿಂದ ದೊಡ್ಡಣಗುಡ್ಡೆ ಸಂಪರ್ಕ ರಸ್ತೆವರೆಗೆ ಸುಮಾರು 6 ಕಡೆಗಳಲ್ಲಿ ರಸ್ತೆ ವಿಭಾಜಕ ತುಂಡರಿಸಿ ಯೂರ್ಟನ್​ ಮಾಡಲಾಗಿದೆ. ವಿಶೇಷವೆಂದರೆ ಕೇವಲ 10 ಮೀಟರ್​ ಅಂತರದಲ್ಲಿ ಎರಡು ಯೂರ್ಟನ್​ಗಳನ್ನೂ ಇಲ್ಲಿ ಕಾಣಬಹುದು. ಇದರಿಂದ ಎಲ್ಲೆಂದರಲ್ಲಿ ವಾಹನಗಳು ಹೆದ್ದಾರಿಗೆ ನುಗ್ಗುತ್ತಿದ್ದು, ವಾರಕ್ಕೆ ಸರಾಸರಿ 3&4 ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿದ್ದರೂ ನಗರಸಭೆ ಆಡಳಿತ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮೌನವಹಿಸಿದೆ. ಅಪಘಾತ ನಿಯಂತ್ರಣಕ್ಕೆ ಅಗತ್ಯ ಸಲಹೆ ಸೂಚನೆ ನೀಡಬೇಕಾದ ಸಂಚಾರಿ ಪೊಲೀಸರು ಒಂದು ಕಡೆ ಬ್ಯಾರಿಕೇಡ್​ ಹಾಕಿ ಕೈತೊಳೆದುಕೊಂಡಿದ್ದಾರೆ ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಹೆಸರಿಗೆ ಚತುಷ್ಪಥ, ಈಗಲೂ ದ್ವಿಪಥ!
ಅಂಬಾಗಿಲಿನಿಂದ ಕಲ್ಸಂಕ ಸಂಪರ್ಕಿಸುವ ನಗರಸಭೆ ರಸ್ತೆ ಇದಾಗಿದ್ದು, ಕಲ್ಸಂಕದಿಂದ ಗುಂಡಿಬೈಲಿನವರೆಗೆ ಎರಡು ಬದಿಯಲ್ಲಿ ನಗರ ವೇಗವಾಗಿ ಬೆಳೆಯುತ್ತಿದೆ. ವಸತಿ ಸಮುಚ್ಚಯಗಳು, ಬೃಹತ್​ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿದ್ದು, ರಸ್ತೆ ಬದಿ ವ್ಯಾಪಾರ ಚಟುವಟಿಕೆ ಗರಿಗೆದರಿದೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಅಂಗಡಿ, ವ್ಯಾಪಾರ ಮಳಿಗೆಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಗುಂಡಿಬೈಲು ರಸ್ತೆಯಲ್ಲಿ ಬೆಳಗ್ಗೆ ಮತ್ತು ರಾತ್ರಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್​, ಬೇಕಾಬಿಟ್ಟಿ ರಸ್ತೆ ವಿಭಜಕ ತೆರವುಗೊಳಿಸಿ ಯು-ರ್ಟನ್​ ಕಲ್ಪಿಸಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿದೆ. ರಸ್ತೆ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದ್ದು, ಈ ಬಗ್ಗೆ ನಗರಸಭೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.