ಜಿಲ್ಲೆ

ಅವೈಜ್ಞಾನಿಕವಾಗಿ ಬೆಳೆಯುತ್ತಿದೆ ಉಡುಪಿ ನಗರ

Udupi

ಅವಿನ್ ಶೆಟ್ಟಿ ಉಡುಪಿ ಕಳೆದ ಭಾನುವಾರ ಭಾರಿ ಮಳೆ ಹಾಗೂ ನೆರೆಯಿಂದ ಉಡುಪಿ ನಗರ ಅಕ್ಷರಶಃ ನಲುಗಿತ್ತು. ಉಡುಪಿ ನಗರ ಪ್ರದೇಶ ಅವೈಜ್ಞಾನಿಕವಾಗಿ ಬೆಳೆಯುತ್ತಿರುವುದು ನೆರೆ ಕಾಣಿಸಿಕೊಳ್ಳಲು ಮೂಲ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ನಗರದಲ್ಲಿ ಎಲ್ಲಿಯೂ ಮಳೆ ನೀರು ಹರಿಯುವ, ಡ್ರೈನೇಜ್, ಚರಂಡಿ ಸಮರ್ಪಕವಾಗಿ ರೂಪುಗೊಂಡಿಲ್ಲ. ನಗರೀಕರಣ ದುಷ್ಪರಿಣಾಮಕ್ಕೆ ಸಿಲುಕಿ ಜೀವನದಿ ಇಂದ್ರಾಣಿ ತೀರ್ಥ ಗಟಾರವಾಗಿ ಮಾರ್ಪಟ್ಟಿದೆ. ಪ್ರತಿವರ್ಷ ಮಳೆ ಬಂದಾಗಲೂ ಕೆಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಸಾಮಾನ್ಯ. ಈ ವರ್ಷದ ನೆರೆಗೆ ಜನ ಬೆಚ್ಚಿದ್ದಾರೆ. ಮಳೆ ನೀರು ವ್ಯವಸ್ಥಿತವಾಗಿ ಹರಿಯಲು ಸಾಧ್ಯವಾಗದೆ ಒಳಚರಂಡಿ ನೀರು, ಮಳೆ ನೆರೆ ನೀರು ಮಿಶ್ರಣವಾಗಿ ನಗರದಲ್ಲಿ ಕೊಳಕೆಬ್ಬಿಸಿದೆ. ಮಳೆ ನೀರು ಸಾಗುವ ಪರಂಬೋಕು ತೋಡು (ಇಂದ್ರಾಣಿ ತೀರ್ಥ ಹರಿಯುವ ಉಪ ತೋಡುಗಳು) ಒತ್ತುವರಿ ಮಾಡಲಾಗಿದೆ. ಸ್ಥಳೀಯಾಡಳಿತ ಸರಿಯಾಗಿ ಒಳಚರಂಡಿಯಂಥ ಮೂಲ ವ್ಯವಸ್ಥೆ ಕಲ್ಪಿಸದೆ ಗದ್ದೆ ಪ್ರದೇಶಗಳಲ್ಲಿ ಫ್ಲಾೃಟ್, ಬಹುಮಹಡಿ ಕಟ್ಟಡ ನಿರ್ಮಾಣ ಎಗ್ಗಿಲ್ಲದೆ ಸಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಹೋಲ್‌ಸೇಲ್ ವ್ಯಾಪಾರ ಕೇಂದ್ರಗಳು, ಎಣ್ಣೆ ಮಳಿಗೆಗಳಿರುವ ಕಲ್ಸಂಕ ಬಡಗುಪೇಟೆ ರಸ್ತೆಯಲ್ಲಿ ಚರಂಡಿಯೇ ಮಾಯವಾಗಿದೆ. ಹಳೇ ಕಾಲದ ಚರಂಡಿಯಲ್ಲೇ ನೀರು ಹರಿಯಬೇಕು. ಇಲ್ಲಿ ರಸ್ತೆ ಮತ್ತು ಅಂಗಡಿಗಳು ಮಾತ್ರ ಕಾಣುತ್ತವೆ. ಕುಂಡೇಲುಕಾಡು ಸೂಕ್ಷ್ಮ ಪರಿಸರ: ಮಣಿಪಾಲ ಕುಂಡೇಲುಕಾಡು ಸೂಕ್ಷ್ಮ ಪರಿಸರ ಪ್ರದೇಶ. ಮುಂದಾದರೂ ಅದನ್ನು ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಭೂಗರ್ಭಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೆ.ಬಾಲಕೃಷ್ಣ. ಇಂಥ ಪ್ರದೇಶದಲ್ಲಿ ಮಳೆಗಾಲದಲ್ಲಿ ತೇವಾಂಶ ಅಧಿಕವಾಗಿ ಮಣ್ಣಿನ ಸವಕಳಿಯಿಂದ ಭೂಕುಸಿತ ಸಾಮಾನ್ಯ. ಮರ ಕಡಿದು, ಗುಡ್ಡ ಅಗೆದು ಬಹುಮಹಡಿ ಕಟ್ಟಡ ನಿರ್ಮಿಸುವುದು ನಿಲ್ಲಿಸಬೇಕು. ಹಿಂದೆ ಮಳೆ ನೀರು ನಿಲ್ಲುತ್ತಿದ್ದ ತಗ್ಗಿನಿಂದ ಗದ್ದೆ ಪ್ರದೇಶಗಳಲ್ಲಿ ಸಾಕಷ್ಟು ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಪ್ರತಿವರ್ಷ ಇಲ್ಲಿ ನೀರು ಸಾಗಲು ಸಾಧ್ಯವಾಗದೆ ಕೃತಕ ನೆರೆ ಆವರಿಸುತ್ತದೆ. ಸದ್ಯದ ಮಟ್ಟಿಗೆ ಅಪಾಯ ಇಲ್ಲದಿದ್ದರೂ, ನೆರೆ ನೀರಿನ ಪರಿಣಾಮದಿಂದ ಕಟ್ಟಡ ಶಿಥಿಲವಾಗುವ ಸಾಧ್ಯತೆ ಹೆಚ್ಚು.

ಉಡುಪಿ ನಗರದಲ್ಲಿ ಹಂತಹಂತವಾಗಿ ಒಳಚರಂಡಿ ಮತ್ತು ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕ ವಿಧಾನದಲ್ಲಿ ರೂಪಿಸದೆ ಬಹುಮಹಡಿ ಕಟ್ಟಡಗಳಿಗೆ ಅನುಮತಿ ನೀಡಿರುವುದು ಅನಾಹುತಗಳಿಗೆ ಕಾರಣ. ನಗರ ಅಭಿವೃದ್ಧಿ ಶುಲ್ಕ ಎಂದು ಕಟ್ಟಡಗಳಿಂದ ವಸೂಲಿ ಮಾಡಲಾಗುತ್ತದೆ. ಆದರೆ ಅದಕ್ಕೆ ಬೇಕಾದ ಮೂಲವ್ಯವಸ್ಥೆ ಕಲ್ಪಿಸದೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡಲಾಗುತ್ತಿದೆ. ದೂರದೃಷ್ಟಿ, ಯೋಜನಾಬದ್ಧವಾಗಿ ನಗರ ಬೆಳೆಯುತಿಲ್ಲ. ಮುಂದಿನ ದಿನಗಳಲ್ಲಿ ಇನಷ್ಟು ಸಮಸ್ಯೆ ಕಾಡಬಹುದು. -ಡಾ.ರವೀಂದ್ರನಾಥ್ ಶ್ಯಾನುಬಾಗ್ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಅಧಿಕ ಮಳೆಯಿಂದಾಗಿ ಮಣ್ಣಪಳ್ಳ ಕೆರೆ ತುಂಬಿ ಅಲ್ಲಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಇಂದ್ರಾಣಿ ತೀರ್ಥ ಸೇರುತ್ತದೆ. ನೀರು ಉಡುಪಿ ಕಡೆಗೆ ಹರಿದು ಬರುವ ತಗ್ಗು ಪ್ರದೇಶಗಳಲ್ಲಿ ಈ ಹಿಂದೆ ಹೆಚ್ಚು ಮರಗಿಡಗಳು ಇದ್ದರಿಂದ ನೀರು ಹಿಂಗಿಕೊಂಡು ಬರುತ್ತಿತ್ತು. ಇದೀಗ ಗಿಡಮರಗಳು ಕಡಿಮೆಯಾಗಿ ಮಣ್ಣಿನ ಸವಕಳಿ ಹೆಚ್ಚುತ್ತಿರುವುದರಿಂದ ನೀರು ಇಂಗಲು ಸಾಧ್ಯವಾಗದೆ ಇಂದ್ರಾಣಿ ನದಿಗೆ ಸೇರುತ್ತದೆ. ಕಲ್ಸಂಕ ಪ್ರದೇಶದಲ್ಲಿರುವ ಕಾಲುವೆಗಳಿಂದ ನೀರು ಸರಾಗವಾಗಿ ಸಾಗದೆ ಆ ಪರಿಸರದಲ್ಲಿ ನೆರೆ ಸಮಸ್ಯೆ ಉದ್ಭವಿಸುತ್ತಿದೆ. -ಪ್ರೊ.ಕೆ.ಬಾಲಕೃಷ್ಣ ಭೂಗರ್ಭಶಾಸ್ತ್ರ ಪ್ರಾಧ್ಯಾಪಕ, ಎಂಐಟಿ ಮಣಿಪಾಲ ಇಂದ್ರಾಣಿ ತೀರ್ಥ ಪರಂಬೋಕು ತೊಡುಗಳನ್ನು ಗುರುತಿಸಿ ಅದನ್ನು ವ್ಯವಸ್ಥಿತವಾಗಿಸುವ ಕೆಲಸ ಮೊದಲು ಮಾಡಲಾಗುವುದು. ಕೃತಕ ನೆರೆಗೆ ಕಾರಣವಾಗುವ ಅಂಶಗಳನ್ನು ಕುಲಂಕಷ ಅಧ್ಯಯನ ನಡೆಸಲಾಗುತ್ತದೆ. ಯೋಜನಾಬದ್ಧ ನಗರ ನಿರ್ಮಾಣ, ಕಾಲುವೆ ಅಗಲೀಕರಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಜಂಟಿಯಾಗಿ ಯೋಜನೆ ರೂಪಿಸಿ ಕೆಲಸ ಮಾಡುತ್ತೇವೆ. -ರಾಘವೇಂದ್ರ ಕಿಣಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ