ಜಿಲ್ಲೆ

ಅವೈಜ್ಞಾನಿಕವಾಗಿ ಏರ್‌ವಾಲ್ವ್ ಚೇಂಬರ್ ನಿರ್ಮಾಣ

ಗಂಗಾಧರ ಬಿ ವಿ

* ರಸ್ತೆಗೆ ಹೊಂದಿಕೊಂಡಂತಿದೆ ದೊಡ್ಡ ಗಾತ್ರದ ಪೈಪ್‌ಲೈನ್

 * ಚನ್ನಮಾನಹಳ್ಳಿ-ಬನ್ನಿಕುಪ್ಪೆ ರಸ್ತೆಯಲ್ಲಿ ಸವಾರರಿಗೆ ಸಮಸ್ಯೆ

* ಕಂಡೂ ಕಾಣದಂತಿರುವ ಜಲಮಂಡಳಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿಯ ಚನ್ನಮಾನಹಳ್ಳಿ-ಬನ್ನಿಕುಪ್ಪೆ ರಸ್ತೆಯಲ್ಲಿ ಜಲಮಂಡಳಿ ಅವೈಜ್ಞಾನಿಕವಾಗಿ ಏರ್‌ವಾಲ್ ಚೇಂಬರ್ ನಿರ್ಮಾಣ ಮಾಡಲಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಜಲಮಂಡಳಿ ಜಾಣಮೌನ ವಹಿಸಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ತೊರೆಕಾಡನಹಳ್ಳಿಯಿಂದ ರಾಮನಗರಕ್ಕೆ 24/7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಚನ್ನಮಾನಹಳ್ಳಿ, ಅಂಜನಾಪುರ, ಚಿಕ್ಕೇನಹಳ್ಳಿ, ವಿಭೂತಿಕೆರೆ, ರಾಮನಗರ ಬನ್ನಿಕುಪ್ಪೆ ಪ್ರಮುಖ ಜಿಲ್ಲಾ ರಸ್ತೆಯಲ್ಲಿ ರಸ್ತೆಗೆ ಹೊಂದಿಕೊಂಡಂತೆಯೇ ದೊಡ್ಡ ಗಾತ್ರದ ಪೈಪ್‌ಲೈನ್ ಕಾಮಗಾರಿ ನಡೆಸಲಾಗಿದೆ.

ಪೈಪ್‌ಲೈನ್ ಅಳವಡಿಸಿರುವ ಸ್ಥಳದಲ್ಲಿ ಅಲ್ಲಲ್ಲಿ ನೀರು ಸರಾಗವಾಗಿ ಹರಿದು ಬರುವಂತೆ ಗಾಳಿಯ ಒತ್ತಡ ಸಿಗಲು ರಸ್ತೆಯಲ್ಲೇ ಏರ್‌ವಾಲ್ವ್ ಛೇಂಬರ್ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಇಂಥ ಸ್ಥಳದಲ್ಲಿ ವಾಲ್ವ್‌ಗಳನ್ನು ಅವೈಜ್ಞಾನಿಕವಾಗಿ ರಸ್ತೆಗಿಂತ ಎತ್ತರವಾಗಿ ಹಲವು ಕಡೆಗಳಲ್ಲಿ ಚೇಂಬರ್ ನಿರ್ಮಾಣ ಮಾಡಿದ್ದಾರೆ. ಇದರಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಪ್ರಮುಖ ರಸ್ತೆಯಾಗಿರುವ ಕಾರಣ ವಾಹನಗಳ ವೇಗ ಹೆಚ್ಚಿರುತ್ತದೆ. ವೇಗವಾಗಿ ಬರುವ ವಾಹನಗಳು ಚೇಂಬರ್‌ಗೆ ಡಿಕ್ಕಿ ಹೊಡೆಯುಂತಾಗಿದೆ.

ಚನ್ನಮಾನಹಳ್ಳಿಯ ಮಧ್ಯೆ ನಿರ್ಮಾಣ ಮಾಡಿರುವ ವಾಲ್ವ್ ಸ್ಥಳ ರಸ್ತೆಗಿಂತ ಒಂದು ಅಡಿಗಿಂತ ಎತ್ತರದ ಚೇಂಬರ್ ಮೇಲಿದೆ. ಚಿಕ್ಕೇನಹಳ್ಳಿ, ನಾಗಲಾಪುರ ಗ್ರಾಮದ ಬಳಿ, ಕವಣಾಪುರ ಶಿವನಹಳ್ಳಿ ದೇವಸ್ಥಾನದ ರಸ್ತೆಯಲ್ಲಿ ತಿರುವಿನಲ್ಲಿರುವ ಚೇಂಬರ್ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ರಾಮನಗರ ಬನ್ನಿಕುಪ್ಪೆ ರಸ್ತೆ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಯಾಗಿದೆ. ಸದಾ ವಾಹನಗಳು ಗಿಜಿಗುಡುತ್ತವೆ. ರಸ್ತೆಯಲ್ಲಿ ಎತ್ತರವಾಗಿ ಚೇಂಬರ್ ನಿರ್ಮಾಣ ಮಾಡಿರುವ ಕಾರಣ ಅಪಾಯ ಕಟ್ಟಿಟ್ಟಬುತ್ತಿ. ಸಂಬಂಧಪಟ್ಟ ಜಲಮಂಡಳಿಗೆ ತಿಳಿಸಿದರೂ ಪ್ರಯೋಜವಾಗಿಲ್ಲ. ಲೋಕೋಪಯೋಗಿ ಇಲಾಖೆ ಗಮನಕ್ಕೂ ತಂದರೂ ಸಮಸ್ಯೆ ಸರಿಪಡಿಸಲು ಮುಂದಾಗುತ್ತಿಲ್ಲ.

ಇದೇ ರೀತಿ ಚನ್ನಮಾನಹಳ್ಳಿ ಸೇರಿ ಸಮಸ್ಯೆಯಾಗಿರುವ ಸ್ಥಳಗಳಲ್ಲಿ ವಾಲ್ವ್ ಚೇಂಬರ್ ಸರಿಪಡಿಸಬೇಕು. ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆ, ಜಲಮಂಡಳಿ ಕಚೇರಿ ಎದುರು ಸಾರ್ವಜನಿಕರು ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ರಸ್ತೆಯಿಂದ ಒಂದು ಅಡಿಗೂ ಎತ್ತರ ಚೇಂಬರ್ ನಿರ್ಮಾಣ ಮಾಡಲಾಗಿದೆ. ಜಲಮಂಡಳಿ ಅಧಿಕಾರಿಗಳಿಗೆ ಇದು ರಸ್ತೆ ಎಂದು ಕಾಣಲಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ಸದಾ ಓಡಾಟವಿರುವ ರಸ್ತೆಯಲ್ಲಿ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.

 ಮುನಿರಾಜು, ಚನ್ನಮಾನಹಳ್ಳಿ.