ಸುನಿಲ್ ವಿ.ಸೋಮತ್ತನಹಳ್ಳಿ ಚನ್ನರಾಯಪಟ್ಟಣ
ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಡೆಗಣನೆ ಇಂದಿಗೂ ಮುಂದುವರೆದಿದೆ, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ರಸ್ತೆಗಳ ಕಡೆ ಗಮನ ನೀಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಲೇ ಇದ್ದಾರೆ.
ಇದಕ್ಕೆ ಸಾಕ್ಷಿ ಎನ್ನುವಂತೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಕಗ್ಗಲಹಳ್ಳಿ ಹಾಗೂ ಬೂದಿಗೆರೆಗೆ ಹೋಗುವ ಮುಖ್ಯರಸ್ತೆ ಕಡೆಗಣಿಸಲ್ಪಟ್ಟಿದೆ. ಮಳೆಗಾಲದಲ್ಲಿ ಸಣ್ಣ ಕೆರೆಯೇ ನಿರ್ಮಾಣವಾಗುವ ಈ ರಸ್ತೆಯಲ್ಲಿ ವಾಹನ ಸಂಚಾರ, ಜನರ ಓಡಾಟಕ್ಕೆ ಸಂಕಷ್ಟ ಎದುರಾಗುತ್ತಿದೆ. ಸರ್ಕಾರದಿಂದ ಪ್ರತಿ ವರ್ಷ ರಸ್ತೆ ಸೇರಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣ ಮಂಜೂರಾಗುತ್ತಲೇ ಇದ್ದರೂ ಹಳ್ಳಿ ರಸ್ತೆಯ ಸಮಸ್ಯೆಗೆ ಪರಿಹಾರ ಇಲ್ಲದಾಗಿದೆ. ಕಗ್ಗಲಹಳ್ಳಿ ರಸ್ತೆ ಅಭಿವೃದ್ಧಿ ವಿಚಾರ ಗ್ರಾಮಸ್ಥರ ಪಾಲಿಗೆ ಕಗ್ಗಂಟಾಗಿಯೇ ಉಳಿದಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಜಿಲ್ಲೆಗೆ ಉಸ್ತುವಾರಿ ಮಂತ್ರಿಯೂ ಆಗಿದ್ದಾರೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಡೆಗೆ ಸಚಿವರು ಗಮನ ನೀಡುವರೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿದೆ.
ಗುಣಮಟ್ಟದ ಕಾಳಜಿ ಇಲ್ಲ: ಯಾವುದೇ ಪಕ್ಷ, ವ್ಯಕ್ತಿ ಅಧಿಕಾರದಲ್ಲಿರಲಿ, ರಸ್ತೆ ಅಭಿವೃದ್ಧಿಗಾಗಿಯೇ ಬೇರೆ ಬೇರೆ ಮೂಲಗಳಿಂದ ಅನುದಾನ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಪಿಡಬ್ಲೂಡಿ, ಪ್ರಧಾನಮಂತ್ರಿ ಗ್ರಾಮ ಸಡಕ್‌ಯೋಜನೆ, ಮುಖ್ಯಮಂತ್ರಿ ಗ್ರಾಮ ಸಡಕ್, ಸಂಸದರ ನಿಧಿ, ಶಾಸಕರ ನಿಧಿ ಒಂದೇ ಎರಡೇ.. ರಸ್ತೆ ಅಭಿವೃದ್ಧಿಗಾಗಿಯೇ ಕೋಟ್ಯಂತರ ರೂ. ಹಣ ಹರಿದು ಬರುತ್ತಲೇ ಇರುತ್ತದೆ. ಆದರೆ ರಸ್ತೆ ಕಾಮಗಾರಿ ಮುಗಿದ ನಂತರ ಬಿಲ್ ಪಾವತಿಯ ಬಗ್ಗೆ ತರಾತುರಿ ಇರುತ್ತದೆಯೇ ಹೊರತು ಆ ರಸ್ತೆಯ ಗುಣಮಟ್ಟವೇನು ಎಂಬ ಬಗ್ಗೆ ಯಾರೊಬ್ಬರೂ ಗಮನ ನೀಡುವುದಿಲ್ಲ ಇದರ ಪರಿಣಾಮವಾಗಿ ಗ್ರಾಮೀಣ ರಸ್ತೆಗಳು ಕಳಪೆಯಿಂದಾಗಿ ಬೇಗ ಹಾಳಾಗುತ್ತವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಡಾಂಬರು ಭಾಗ್ಯವಿಲ್ಲ: ಹಲವು ವರ್ಷದಿಂದ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಸಿಕ್ಕಿಲ್ಲ. ರಸ್ತೆಯುದ್ದಕ್ಕೂ ಹಳ್ಳ ಕೊಳ್ಳಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಂತು ಅವಾಂತರ ಸೃಷ್ಟಿಯಾಗುತ್ತದೆ. ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ರಸ್ತೆ ಹಾಳಾಗುವುದಕ್ಕೆ ಕಾರಣವಾಗಿದೆ. ಸುಮಾರು ತಿಂಗಳಿನಿಂದ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಿದರೆ ಮಳೆಯ ನೀರು ಸರಗವಾಗಿ ಹರಿಯುತ್ತದೆ. ಜತೆಗೆ ರಸ್ತೆ ಅಭಿವೃದ್ಧಿಪಡಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಕಗ್ಗಲಹಳ್ಳಿಯ ಮುಖಂಡ ವೆಂಕಟೇಶ್ ಹೇಳುತ್ತಾರೆ.
ಕಗ್ಗಲಹಳ್ಳಿಯ ರಸ್ತೆ ಮಳೆ ಬಂದರೆ ಕುಂಟೆ ರೀತಿ ಮಾರ್ಪಾಡಾಗುತ್ತದೆ, ಗ್ರಾಮ ಪಂಚಾಯಿತಿ ವತಿಯಿಂದ ಡಾಂಬರ್ ರಸ್ತೆ ನಿರ್ಮಿಸಲು ಆಗುವುದಿಲ್ಲ. ತಾಲೂಕಿನ ಶಾಸಕರ ಗಮನಕ್ಕೆ ತರುತ್ತೇವೆ. ಈ ರಸ್ತೆ ನಿರ್ಮಾಣವಾದರೆ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಅನುಕೂಲವಾಗುತ್ತದೆ. ಈ ರಸ್ತೆಯಲ್ಲಿ ಶಾಲಾ ವಾಹನಗಳು ಪ್ರತಿನಿತ್ಯ ಚಲಿಸುತ್ತವೆ. ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕೆ ಮೂಲಸೌಕರ್ಯಕ್ಕೆ ಒತ್ತು ನೀಡುತ್ತಿದ್ದೇವೆ.ಕಮಲೇಶ್ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ರಸ್ತೆ ನಿರ್ಮಾಣವಾಗಬೇಕಾದರೆ ರಸ್ತೆ ಎತ್ತರಗೊಳಿಸಿ ಡಾಂಬರೀಕರಣ ಮಾಡಬೇಕಿದೆ, ಗ್ರಾಮ ಪಂಚಾಯಿತಿ ವತಿಯಿಂದ ಮಣ್ಣಿನ ರಸ್ತೆ ನಿರ್ಮಾಣ ಮಾಡುವುದಕ್ಕೆ ಅವಕಾಶ ಇರುತ್ತದೆ. ತಾಲೂಕಿನ ಶಾಸಕರು ಯಾವುದಾದರೂ ಅನುದಾನದಲ್ಲಿ ಕಗ್ಗಲಹಳ್ಳಿಯಿಂದ ಬೂದಿಗೆರೆ ಹೋಗುವ ರಸ್ತೆ ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗುತ್ತದೆ.ನವೀನ್ ಕಗ್ಗಲಹಳ್ಳಿ