ಕಾರಟಗಿ ತಾಲೂಕಿನ ಉಳೇನೂರಿನಲ್ಲಿ ಮಳೆಯ ಹೊಡೆತಕ್ಕೆ ನೆಲಕಚ್ಚಿದ್ದ ಭತ್ತದ ಬೆಳೆ. 
ಜಿಲ್ಲೆ

ಸರ್ಕಾರದಿಂದ ಬಿಡುಗಡೆಯಾಗದ ಹಣ

ಕಾರಟಗಿ: ಭಾರೀ ಮಳೆ ಹೊಡೆತಕ್ಕೆ 2024-25ನೇ ಸಾಲಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಗೊಳಗಾಗಿದ್ದು, ಈವರೆಗೆ ಸರ್ಕಾರದಿಂದ 5.91 ಕೋಟಿ ರೂ. ಬೆಳೆ ಹಾನಿ ಪರಿಹಾರ ಪಾವತಿಯಾಗಿದೆ. ತಾಲೂಕಿನ ಸಿದ್ದಾಪುರ ವ್ಯಾಪ್ತಿಯ ಉಳೇನೂರು, ಕಕ್ಕರಗೋಳ, ನಂದಿಹಳ್ಳಿ, ಗುಂಡೂರು, ಬರಗೂರು ಸೇರಿ ಕಾರಟಗಿ ಹೋಬಳಿ ವ್ಯಾಪ್ತಿಯ ಯರಡೋಣ, ಬೂದಗುಂಪಾ, ಹುಳ್ಕಿಹಾಳ ಭಾಗಗಳಲ್ಲಿ ಬೆಳೆ ಹಾನಿಯಾಗಿತ್ತು. ಇನ್ನೇನು ಕೈಗೆ ಬಂದ ಬೆಳೆ ಕಟಾವು ಮಾಡಬೇಕು ಎನ್ನುವಾಗಲೇ ಮಳೆಯ ಆರ್ಭಟ ಹೆಚ್ಚಿದ್ದು, ಗಾಳಿ, ಮಳೆ ಹೊಡೆತಕ್ಕೆ ಬೆಳೆ ಮಕಾಡೆ ಮಲಗಿತು. ಭತ್ತ ನಾಟಿಯಿಂದ ಹಿಡಿದು ಬೆಳೆ ಕಟಾವಿನವರೆಗೂ ರೈತರು ಸಾವಿರಾರು ರೂ. ವ್ಯಯಿಸಿದ್ದರು. ಇದರ ಮಧ್ಯೆ ಕಳೆದ ವಷರ್ ನಿರಂತರ ಸುರಿದ ಮಳೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ತೇವಾಂಶ ಹೆಚ್ಚಿದ್ದರಿಮದ ಬೆಳೆಗಳಿಗೆ ಕೊಳವೆ ರೋಗ, ಕಣೇ ನೊಣ ಬಾಧೆ ಸೇರಿ ಇತರೆ ರೋಗಗಳು ಕಾಣಿಸಿಕೊಂಡಿದ್ದರಿಂದ ಇಳುವರಿಯಲ್ಲೂ ಸಹ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಬೆಳೆಹಾನಿಯಿಂದ ಸಂಕಷ್ಟದಲ್ಲಿದ್ದ ರೈತರನ್ನು ರೋಗಭಾಧೆ ಸಹ ಹಿಂಡಿ ಹಿಪ್ಪೆ ಮಾಡಿತ್ತು. ಈಗ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಹಾಕಲಾಗಿದೆ. 5 ಹಂತದಲ್ಲಿ ಬೆಳೆ ಪರಿಹಾರ ಪಾವತಿಸಲಾಗಿದೆ. ಮೊದಲ ಹಂತದಲ್ಲಿ 1.52 ಕೋಟಿ ರೂ., 2ನೇ ಹಂತದಲ್ಲಿ ಯಾಹುದೇ ಬೆಳೆಹಾನಿ ಪರಿಹಾರ ವಿತರಿಸಲಾಗಿಲ್ಲ. 3ನೇ ಹಂತದಲ್ಲಿ 2.63 ಕೋಟಿ ರೂ. ಹಾಗೂ 4ನೇ ಹಂತದಲ್ಲಿ 1.75 ಕೋಟಿ ರೂ. ಬೆಳೆ ಪರಿಹಾರ ಪಾವತಿಸಲಾಗಿದೆ. ಇನ್ನೂ 5ನೇ ಹಂತದಲ್ಲಿ 6 ಜನ ಫಲಾನುಭವಿಗಳಿಗೆ 49,385 ರೂ. ಪಾವತಿಯಾಗಬೇಕಿದೆ. ಸಂಕಷ್ಟದಲ್ಲಿದ್ದ ರೈತರಿಗೆ ಬೆಳೆಹಾನಿ ಪರಿಹಾರ ತುಸು ನೆಮ್ಮದಿ ನೀಡಿದೆ. ರೈತರ ಖಾತೆಗೆ ಪಾವತಿಯಾಗಿಲ್ಲ: ಭಾರೀ ಮಳೆಯ ಹೊಡೆತಕ್ಕೆ 2023-24ನೇ ಸಾಲಿನಲ್ಲಿ ಹಾನಿಗೊಳಗಾದ ಬೆಳೆ ಪರಿಹಾರದ ಹಣ ಇನ್ನೂ ರೈತರ ಖಾತೆಗೆ ಪಾವತಿಯಾಗಿಲ್ಲ. 2023-24ನೇ ಸಾಲಿನ ಬ್ಯಾಚ್ -2ಕ್ಕೆ ಸಂಬಂಧಿಸಿದಂತೆ ಒಟ್ಟು 2,943 ರೈತರ ಖಾತೆಗಳಿಗೆ ಬೆಳೆ ಪರಿಹಾರ ದೊರೆಯಬೇಕಿದೆ. ಈ ಹಂತದಲ್ಲಿ ಬರೋಬ್ಬರಿ 3,20,48,560 ರೂ. ಪರಿಹಾರ ಹಣ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಈ ಸಂಬಂಧ ತಾಲೂಕಾಡಳಿತದಿಂದ ನ.8 2024 ರಂದು ಮೇಲಾಧಿಕಾರಿಗಳಿಗೆ ವರದಿ ಸಹ ಮಾಡಲಾಗಿದೆ. 2024-25ನೇ ಸಾಲಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 5.91 ಕೋಟಿ ರೂ. ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಿದೆ. ಎಲ್ಲರಿಗೂ ಬೆಳೆಹಾನಿ ಪರಿಹಾರ ದೊರೆಯುವುದಿಲ್ಲ. ನಾರ್ಮ ಪ್ರಕಾರ ವಿದ್ದರೆ ದೊರೆಯುತ್ತಿದೆ. ಕಳೆದ ಬಾರಿಯ 3 ಕೋಟಿ ರೂ. ಬೆಳೆಹಾನಿ ಪರಿಹಾರ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಎಂ. ಕುಮಾರಸ್ವಾಮಿ ತಹಸೀಲ್ದಾರ್, ಕಾರಟಗಿ