ದೇವದುರ್ಗ: ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಕಟ್ಟಡ ಸೇರಿ ಇತರೆ ನಿರ್ಮಾಣ ಕಾರ್ಮಿಕರಿಗೆ ಅಗತ್ಯ ಪರಿಹಾರ ನೀಡುವಂತೆ ಒತ್ತಾಯಿಸಿ ಜಾಲಹಳ್ಳಿಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಮನೆಮನೆಯಲ್ಲಿ ಪ್ರತಿಭಟನೆ ಅಭಿಯಾನ ಬೆಂಬಲಿಸಿ ಶನಿವಾರ ಹೋರಾಟ ನಡೆಸಿದವು.
ಲಾಕ್‌ಡೌನ್‌ನಿಂದ ಕಟ್ಟಡ ಕಾರ್ಮಿಕರು, ಕೂಲಿಕಾರರು ಸೇರಿ ಅಸಂಘಟಿತ ಕಾರ್ಮಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ದುಡಿಮೆ ಇಲ್ಲದೆ ಜೀವನ ನಡೆಸುವುದು ದುಸ್ತರವಾಗಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೆ ಅನ್ಯಾಯ ಮಾಡಿದೆ ಎಂದು ದೂರಿದರು.
ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕರಿಗೆ ಕೂಡಲೇ ಆಹಾರದ ಧಾನ್ಯ ಸೇರಿ ಅಗತ್ಯ ಪರಿಹಾರ ನೀಡಬೇಕು. ಉಚಿತ ವ್ಯಾಕ್ಸಿನ್ ಹಾಗೂ ಔಷಧ ನೀಡಬೇಕು. ಕರೊನಾ ತಡೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಕರೊನಾ ಸೋಂಕಿನಿಂದ ಮೃತಪಟ್ಟ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಕೊಂಡಯ್ಯ ಗೋಸಲ್, ಜಾನಯ್ಯ, ಗೋವಿಂದ ಕಟ್ಟಿಮನಿ, ರಂಗನಾಥ, ಮೈಹಿಬೂಬ್ ಮುದಗಲ್ ಇತರರು ಇದ್ದರು.