ಆಲೂರು: ತಾಲೂಕಿನ ಕದಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಬಣದ 12 ಜನರು ಅವಿರೋಧವಾಗಿ ಆಯ್ಕೆಯಾದರು.
ಸಂಘದ 2025 ರಿಂದ 2030ನೇ ಸಾಲಿಗೆ ಫೆ.23 ರಂದು ಚುನಾವಣೆ ನಿಗದಿಯಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಭಾನುವಾರ ಕೊನೇ ದಿನವಾಗಿತ್ತು. ಎರಡು ಮಹಿಳಾ ಮೀಸಲು ಸ್ಥಾನಗಳಿಗೆ ಸುಮಿತ್ರಾ, ದ್ಯಾವಮ್ಮ, ಜಯಂತಿ ಹಾಗೂ ಇಂದ್ರಮ್ಮ ಸ್ಪರ್ಧಿಸಿದ್ದರು. ದ್ಯಾವಮ್ಮ ಹಾಗೂ ಇಂದ್ರಮ್ಮ ನಾಮಮಪತ್ರ ಹಿಂಪಡೆದಿದ್ದರಿಂದ ಸುಮಿತ್ರಾ ಮತ್ತು ಜಯಂತಿ ಅವಿರೋಧವಾಗಿ ಆಯ್ಕೆಯಾದರು. ಪ.ಪಂಗಡ ಮೀಸಲು ಸ್ಥಾನಕ್ಕೆ ತಿಮ್ಮಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಅಂತಿಮವಾಗಿ ಕಣದಲ್ಲಿ 31 ಜನ ಉಳಿದಿದ್ದರು ಅದರಲ್ಲಿ 19 ಜನರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕಬ್ಬಿನಲ್ಲಿ ಜಗದೀಶ್ ಬಣದ 11 ಜನರು ಸಾಲಗಾರರ ಕ್ಷೇತ್ರಕ್ಕೆ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ ಒಬ್ಬರು ಆಯ್ಕೆಯಾದರು.
ನೂತನ ನಿರ್ದೇಶಕರಾಗಿ ಸಾಲಗಾರರ ಕ್ಷೇತ್ರದಿಂದ ಜಗದೀಶ್, ಗಂಗೆೇಗೌಡ, ದೇವರಾಜೇಗೌಡ, ರಾಮಚಂದ್ರು, ರಂಗಸ್ವಾಮಿ, ಈರನಾಯಕ, ತಿಮ್ಮಯ್ಯ, ಸೋಮಶೇಖರ, ಕೇಶವಮೂರ್ತಿ, ಸುಮಿತ್ರಾ, ಜಯಂತಿ, ತಿಮ್ಮಯ್ಯ ಹಾಗೂ ನಾಗರಾಜ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕುಮಾರ್ ತಿಳಿಸಿದರು.
ನೂತನ ನಿರ್ದೇಶಕರ ಆಯ್ಕೆ ಪೂರ್ಣಗೊಂಡ ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ರಾಜಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಲೊಕೇಶ್, ಸಹಕಾರ ಸಂಘದ ಜಿಲ್ಲಾ ಒಕ್ಕೂಟದ ನಿರ್ದೇಶಕ ಪ್ರವೀಣ್, ಸಂಘದ ಕಾರ್ಯದರ್ಶಿ ರವಿಕಿರಣ್, ಸಿಬ್ಬಂದಿ ದಿಲೀಪ್ ಇತರರಿದ್ದರು.