ಜಿಲ್ಲೆ

ಶಿವಕುಮಾರ್​ಗೆ ಮತ್ತೆ ಪಟ್ಟ

ಚನ್ನಗಿರಿ: ಚನ್ನಗಿರಿ ತುಮ್ೋಸ್ ಚುನಾವಣೆಯಲ್ಲಿ ತಮ್ಮ ಬಣದೊಂದಿಗೆ ಭರ್ಜರಿ ಜಯಭೇರಿ ಬಾರಿಸಿದ್ದ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ನಿರೀಕ್ಷೆಯಂತೆ ಬುಧವಾರ, ತುಮ್ಕೋಸ್ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದರು.

2010 ರಲ್ಲಿ ಮೊದಲ ಬಾರಿ ತುಮ್ಕೋಸ್ ಗದ್ದುಗೆ ಏರಿದ್ದ ಶಿವಕುಮಾರ್ 2015ರಲ್ಲೂ ಮರು ಆಯ್ಕೆ ಆಗಿದ್ದರು. 2020 ರಲ್ಲಿ ತಮ್ಮ ಬಣ ಗೆಲ್ಲಿಸಿಕೊಳ್ಳಲು ವಿಪಲರಾಗಿದ್ದರು. ಆದರೆ, 2025 ರಲ್ಲಿ ಎಲ್ಲ 15 ನಿರ್ದೇಶಕ ಸ್ಥಾನಗಳಲ್ಲಿ ಕ್ಲೀನ್ ಸ್ವೀಪ್ ಮಾಡಿ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ.

ತುಮ್ಕೋಸ್​ನ 15 ನಿರ್ದೇಶಕರ ಸ್ಥಾನಗಳಿಗೆ ಫೆ. 9 ರಂದು ಮತದಾನ ನಡೆದಿತ್ತು. ಕೋರ್ಟ್ ಆದೇಶದನ್ವಯ ಮಾ. 10 ರಂದು ಫಲಿತಾಂಶ ಪ್ರಕಟವಾಗಿತ್ತು. ಅಧ್ಯಕ್ಷರ ಚುನಾವಣೆಗೆ ಮಾ.19ರ ದಿನವನ್ನು ಅಂದೇ ನಿಗದಿ ಮಾಡಲಾಗಿತ್ತು.

ಬುಧವಾರ ಮತದಾನ ಪ್ರಕ್ರಿಯೆ ಆರಂಭವಾದಾಗ ಎಚ್.ಎಸ್.ಶಿವಕುಮಾರ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ತಿಪ್ಪಗೊಂಡನಹಳ್ಳಿ ಟಿ.ವಿ.ರಾಜು ಹಾಗೂ ಅನುಮೋದಕರಾಗಿ ಎಚ್.ಎಸ್. ಮಂಜುನಾಥ್ ಸಹಿ ಹಾಕಿದ್ದರು. ನಾಮಪತ್ರ ಪರಿಶೀಲನೆ, ಮತ್ತಿತರ ಪ್ರಕ್ರಿಯೆಗಳ ಬಳಿಕ ಚುನವಣಾಧಿಕಾರಿ ಮಂಜುಳಾ ಅವಿರೋಧ ಆಯ್ಕೆ ಘೊಷಿಸಿದರು.

ಅಧ್ಯಕ್ಷರ ಹೆಸರು ಘೊಷಣೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ತುಮ್ಕೋಸ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು.

ಅಡಕೆ ಬೆಳೆಗಾರರ ಹಿತ ಕಾಯುವೆ: ತುಮ್ಕೋಸ್ ವ್ಯಾಪ್ತಿಯ ಬೆಳೆಗಾರರ ಹಿತ ಕಾಯುವ ಜತೆಗೆ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ನೂತನ ಅಧ್ಯಕ್ಷ ಎಚ್.ಎಸ್.ಶಿವಕಮಾರ್ ತಿಳಿಸಿದರು.

ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಮತದಾರರಿಗೆ ಹಾಗೂ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ಉತ್ತಮ ಕೆಲಸ ಮಾಡಲು ಎಲ್ಲರ ಸಹಕಾರ ಕೋರಿದರು.

ತುಮ್ಕೋಸ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಅಡಕೆ ಬೆಳೆಗಾರರೇ ಕಾರಣ. ಪರಿಶುದ್ಧ ಅಡಕೆ ಖರೀದಿಸಿ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಉಳಿಸಿಕೊಂಡಿದೆ. ಇದೇ ಕಾರಣಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡ ಲಭಿಸಿತ್ತು ಎಂದು ಸ್ಮರಿಸಿದರು.

ಸಂಸ್ಥೆಯ ತನ್ನ ಸದಸ್ಯರಿಗೆ ಸಾಕಷ್ಟು ಅನುಕೂಲ ನೀಡುತ್ತ ಬಂದಿದೆ. ಹೀಗಾಗಿ ಬೆಳೆಗಾರರು ತಾವು ಬೆಳೆದ ಅಡಕೆಯನ್ನು ಮನೆ ಬಳಿ ಬರುವ ಕೈ ವ್ಯಾಪಾರಿಗಳಿಗೆ ಮಾರಾಟ ಮಾಡದೆ ನೇರವಾಗಿ ತುಮ್ಕೋಸ್ ಸಂಸ್ಥೆಗೇ ಮಾರಾಟ ಮಾಡುವಂತೆ ಮನವಿ ಮಾಡಿದರು.

ನಿದೇರ್ಶಕರಾದ ಟಿ.ವಿ.ರಾಜು, ಮೀನಾಕ್ಷಿ ,ಎಲ್.ವಿ. ಶೋಭಾ, ಜೆ.ಬಿ. ವಿಜಯಕುಮಾರ್, ಕೆ.ಜಿ. ಓಂಕಾರ ಮೂರ್ತಿ, ಬಿ. ಚನ್ನಬಸಪ್ಪ, ಲೋಕೇಶ್ವರ, ಎಸ್. ರಘು ನಾಯ್ಕ, ಎಂ.ಎನ್. ಗಂಗಾಧರಪ್ಪ, ಎಚ್.ಎಸ್. ಮಂಜುನಾಥ್, ಎಂ. ಮಂಜುನಾಥ್, ಪ್ರಭುಲಿಂಗಪ್ಪ, ಆರ್. ಶಿವಕುಮಾರ್ , ಎಸ್. ಬಸವರಾಜ್ ಹಾಗೂ ವ್ಯವಸ್ಥಾಪಕ ಮಧು ಇದ್ದರು.