ಜಿಲ್ಲೆ

ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆಯಾಗಿ 12ನೇ ವಾರ್ಡ್ ಸದಸ್ಯೆ ಶಕೀಲಾಬಾನು ಅವಿರೋಧ ಆಯ್ಕೆಯಾಗಿದ್ದಾರೆ.

ಜಿ.ಎಸ್. ಶ್ರೀದೇವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

ಶಕೀಲಾಬಾನು ಅವರು ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ನಾಮಪತ್ರ ಸ್ವೀಕರಿಸಿ, ಪರಿಶೀಲನೆ ನಡೆಸಿದರು. ನಿಗದಿಪಡಿಸಿದ ಅವಧಿಯೊಳಗೆ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಶಕೀಲಾಬಾನು ಅವರು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಖುರೇಷಿ ಘೋ ಷಿಸಿದರು.

ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ನಗರಸಭೆ ಅಧ್ಯಕ್ಷೆ ಬಿ.ಎನ್. ಸಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸುರುಲ್ಲಾ, ಪೌರಾಯಕ್ತೆ ಎಂ. ರೇಣುಕಾ ಇದ್ದರು.

ಈ ನಗರಸಭೆಯಲ್ಲಿ 35 ವಾರ್ಡ್‌ಗಳ ಚುನಾಯಿತ ಸದಸ್ಯರು ಹಾಗೂ ಸ್ಥಳೀಯ ವಿಧಾನಸಭೆ ಶಾಸಕ ಮತ್ತು ಸಂಸದರು ಸೇರಿ ಒಟ್ಟು 37 ಸದಸ್ಯ ಬಲವಿದೆ. 9 ಸದಸ್ಯರು ಉಪಾಧ್ಯಕ್ಷರ ಚುನಾವಣೆಗೆ ಗೈರು ಹಾಜರಾಗಿದ್ದರು.