ತಿ.ನರಸೀಪುರ: ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮಲ್ಲಣ್ಣ ಬಣದ ಮೂವರು ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ 2025 ರಿಂದ 2030ನೇ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಫೆ.16ರಂದು ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಉಮೇದುವಾರಿಕೆ ಹಿಂಪಡೆಯಲು ಸೋಮವಾರ ಕೊನೇ ದಿನವಾಗಿತ್ತು. ಇಬ್ಬರು ಮಹಿಳಾ ಮೀಸಲು ಸ್ಥಾನಗಳಲ್ಲಿ ಸ್ಪರ್ಧೆ ಬಯಸಿ ನಾಗಮ್ಮ, ಎಂ.ನಾಗರತ್ನಾ ಹಾಗೂ ರತ್ನಮ್ಮ ಕಣದಲ್ಲಿದ್ದರು. ರತ್ನಮ್ಮ ನಾಮಪತ್ರ ಹಿಂಪಡೆದಿದ್ದರಿಂದ ನಾಗಮ್ಮ ಮತ್ತು ನಾಗರತ್ನಾ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಪ.ಪಂಗಡ ಮೀಸಲು ಸ್ಥಾನಕ್ಕೆ ಪ್ರಕಾಶ್ ಕುಮಾರ್ ಅವರೊಬ್ಬರೇ ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾದರು.
ಅಂತಿಮ ಕಣದಲ್ಲಿ 21 ಜನ: ಸಂಘದ ಸಾಲಗಾರರ ಕ್ಷೇತ್ರದಿಂದ 8 ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬ ಆಯ್ಕೆಯಾಗಬೇಕಿದ್ದು, 21 ಜನರು ಕಣದಲ್ಲಿದ್ದಾರೆ. ಸಾಮಾನ್ಯ ಸ್ಥಾನಗಳಲ್ಲಿ ಮಲ್ಲಣ್ಣ, ಎನ್.ಶೇಖರ್, ಟಿ.ಸಿ.ಪಣೀಶ್‌ಕುಮಾರ್, ಟಿ.ಎಸ್.ಕೃಷ್ಣ, ಚಂದ್ರು, ಆರ್. ಪುಟ್ಟರಾಜು, ಎಸ್.ಮಹದೇವ, ಮಹಾಲಿಂಗಪ್ಪ, ಬಿ.ಸುಂದರಸ್ವಾಮಿ, ಪಿ.ಸ್ವಾಮಿನಾಥ್ ಹಾಗೂ ಎನ್.ಲೋಕೇಶ್ ಸ್ಪರ್ಧೆಯಲ್ಲಿದ್ದಾರೆ.
ಹಿಂದುಳಿದ ವರ್ಗ ಎ ಸ್ಥಾನಕ್ಕೆ ಚಿಕ್ಕಿರೇಗೌಡ ಮತ್ತು ಬಿ.ರಾಘವೇಂದ್ರ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಬಿ.ಎಂ.ಮಹದೇವಸ್ವಾಮಿ ಹಾಗೂ ಎಂ.ರಾಜಬುದ್ಧಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಬಿ.ನವೀನ್, ಸಿ.ನಾಗರಾಜಪ್ಪ, ಸಿ.ಮಹದೇವ, ಎಂ.ಮಹದೇವಯ್ಯ ಮತ್ತು ಸಾಲಗಾರರಲ್ಲದ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ಟಿ.ಎನ್.ಗುರುಪ್ರಸಾದ್ ಹಾಗೂ ಬಸವರಾಜ್ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ರಮೇಶ್ ತಿಳಿಸಿದ್ದಾರೆ.
ಅವಿರೋಧವಾಗಿ ಆಯ್ಕೆಗೊಂಡ ನಿರ್ದೇಶಕರನ್ನ ಸನ್ಮಾನಿಸಿದ ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ನಷ್ಟದಲ್ಲಿದ್ದ ಸಹಕಾರಿ ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿ, ರೈತರಿಗೆ ಕಾಲಕಾಲಕ್ಕೆ ಬೆಳೆ ಸಾಲ ಹಾಗೂ ಸರ್ಕಾರದ ಸೌಲಭ್ಯಗಳನ್ನ ಪ್ರಾಮಾಣಿಕವಾಗಿ ತಲುಪಿಸಿರುವುದರಿಂದ ಚುನಾವಣೆಯಲ್ಲಿ ಷೇರುದಾರ ರೈತರು ನಮ್ಮ ತಂಡವನ್ನೇ ಕೈ ಹಿಡಿದು ಮತ್ತೊಮ್ಮೆ ಅಧಿಕಾರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ.ಶಿವಕುಮಾರ್, ಕಿರಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗರಾಜು, ಮುಖಂಡರಾದ ಡಿ.ಎಲ್.ಮಹದೇವಪ್ಪ, ಪರಶಿವ, ಅಂಗಡಿ ನಾಗೇಶ್, ಸೀನಪ್ಪ, ಏಳು ಮಲೆ ಮಂಜು, ಸಾಲೂರು ಸ್ವಾಮಿ, ಬಿಳಿಗೆರೆಹುಂಡಿ ಬಸವರಾಜು, ಸಿ.ಎಂ. ಮಹದೇವ, ಬಸವರಾಜು, ದೇವರಾಜಪ್ಪ, ಕೂಡ್ಲೂರು ಶ್ರೀನಿವಾಸ್, ಮಹದೇವ್, ಮನ್ನೆ ಹುಂಡಿ ಚಿನ್ನಸ್ವಾಮಿ ಹಾಗೂ ಇತರರು ಇದ್ದರು.