ದಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶ್ವಥ್‌ಗೌಡ(ತಮ್ಮಣ್ಣ) ಹಾಗೂ ಉಪಾಧ್ಯಕ್ಷ ಸಂತೋಷ್ ಅವರನ್ನು ಅಭಿನಂದಿಸಲಾಯಿತು. 
ಜಿಲ್ಲೆ

ದಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ಬೇಲೂರು: ತಾಲೂಕಿನ ದಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಾಪಂ ಮಾಜಿ ಅಧ್ಯಕ್ಷ ಅಶ್ವಥ್‌ಗೌಡ (ತಮ್ಮಣ್ಣ) ಹಾಗೂ ಉಪಾಧ್ಯಕ್ಷರಾಗಿ ಸಂತೋಷ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಶ್ವಥ್‌ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗುರುಮೂರ್ತಿ ಅವಿರೋಧ ಆಯ್ಕೆ ಘೋಷಿಸಿದರು.

ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಮಾತನಾಡಿ, ಇಲ್ಲಿನ ಸಂಘದಲ್ಲಿ 965 ಷೇರುದಾರರಿದ್ದು, 565 ರೈತರಿಗೆ 7 ಕೋಟಿ ರೂ. ಬೆಳೆಸಾಲ ನೀಡಲಾಗಿದೆ. ಜತೆಗೆ ಶೇಕಡ 100 ರಷ್ಟು ಮರು ಪಾವತಿಯಾಗಿದೆ ಎಂದರು.

ನೂತನ ಅಧ್ಯಕ್ಷ ಅಶ್ವಥ್‌ಗೌಡ ಮಾತನಾಡಿ, ಸಂಘವು ಗೊಬ್ಬರ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದೆ. ದಾಸ್ತಾನು ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ರೈತರಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಸಂಘದಲ್ಲಿಯೇ ಸಿಗುವಂತೆ ಮಾಡಲಾಗುವುದು ಎಂದರು.

ನಿರ್ದೇಶಕರಾದ ಎಸ್.ಎಂ.ನಾಗೇಶ್, ಸತ್ಯನಾರಾಯಣ್, ಹೊನ್ನೇಗೌಡ, ಚೈತ್ರ, ನೇತ್ರಾವತಿ, ಲೋಕೇಶ್, ಚಂದ್ರಶೇಖರ್, ಜಯಮ್ಮ, ದೊಡ್ಡಯ್ಯ, ರಮೇಶ್, ಕಾರ್ಯದರ್ಶಿ ಜಗದೀಶ್, ಮುಖಂಡರಾದ ಹಿರಿಯಣ್ಣಗೌಡ, ಅಬ್ದುಲ್ ಸುಭಾನ್, ಸಿ.ಎಚ್.ಮಹೇಶ್, ಕುಮಾರ್ ಸೇರಿದಂತೆ ಇತರರಿದ್ದರು.