ಸವಣೂರ: ಸ್ಥಳೀಯ ಪುರಸಭೆ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯರಾದ ಅಲ್ಲಾವುದ್ದೀನ್ ಹಸನಮಿಯ್ಯಾ ಮನಿಯಾರ, ಉಪಾಧ್ಯಕ್ಷರಾಗಿ ಖಮರುನ್ನಿಸಾ ಮೌಲಾಲಿ ಪಟೇಲ್ ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಏರ್ಪಡಿಸಲಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 23ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಅಲ್ಲಾವುದ್ದೀನ್ ಹಸನಮಿಯ್ಯಾ ಮನಿಯಾರ, ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡಿನ ಜೆಡಿಎಸ್ (ಕಾಂಗ್ರೆಸ್ ಬೆಂಬಲಿತ) ಸದಸ್ಯೆ ಖಮರುನ್ನಿಸಾ ಮೌಲಾಲಿ ಪಟೇಲ್ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ, ತಹಸೀಲ್ದಾರ್ ಭರತರಾಜ್ ಕೆ.ಎನ್., ಅಧ್ಯಕ್ಷರಾಗಿ ಅಲ್ಲಾವುದ್ದೀನ್ ಮನಿಯಾರ, ಉಪಾಧ್ಯಕ್ಷರಾಗಿ ಖಮರುನ್ನಿಸಾ ಪಟೇಲ್ ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ ಎಂದು ಘೊಷಿಸಿದರು.
ಪುರಸಭೆಯ ಒಟ್ಟು 27 ಸದಸ್ಯರಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಅತಾವುಲ್ಲಾಖಾನ್ ಪಠಾಣ, ಫಜಲಅಹ್ಮದಖಾನ್ ಪಠಾಣ, ಎಸ್.ಅರ್. ಕಲ್ಮಠ, ಪೀರಅಹ್ಮದ ಗವಾರಿ, ಶಿವಾನಂದ ಅರಳಿಕಟ್ಟಿ, ಅಶೋಕ ಮನ್ನಂಗಿ, ಅಬ್ದುಲ್ನಾಶೀರ ಖಿದ್ಮತಗಾರ, ಸೋಪಿಯಾ ಚುಡಿಗರ, ಆಯಿಶಾಫರಹೀನ ಚಂದುಬಾಯಿ ಸೇರಿದಂತ 11 ಸದಸ್ಯರು ಮಾತ್ರ ಹಾಜರಿದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಭರತರಾಜ್ ಕೆ.ಎನ್. ಹಾಗೂ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಹೂಗುಚ್ಛ ನೀಡಿ ಅಭಿನಂದಿಸಿದರು.