ನರಗುಂದ: ಒಂದೇ ಸೂರಿನಡಿ ಮುಕ್ತ ವ್ಯಾಪಾರ, ವಹಿವಾಟು ಕೈಗೊಳ್ಳುವ ಸಲುವಾಗಿ ಪಟ್ಟಣದ ಸುಣದಗಸಿ ಶ್ರೀರಾಮ ಪೇಟೆಯಲ್ಲಿರುವ ಅನಧಿಕೃತ ತರಕಾರಿ ಅಂಗಡಿ, ಮುಂಗ್ಗಟ್ಟುಗಳ ತೆರವು ಕಾರ್ಯಾಚರಣೆ ಗುರುವಾರ ಬೆಳಗ್ಗೆಯಿಂದಲೇ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಕಾರಿ ವ್ಯಾಪಾರಸ್ಥರು, ಪೊಲೀಸ್, ಪುರಸಭೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಿರುವ 84 ಪುರಸಭೆ ಮಳಿಗೆಗಳನ್ನು ಕೆಲವರು ಗೋದಾಮುಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಬಹುತೇಕರು ಪುರಸಭೆಯಿಂದ ನಿಗದಿಪಡಿಸುವ 8*10 ಅಳತೆ ಜಾಗದ ಬದಲಾಗಿ ಹೆಚ್ಚುವರಿ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿದೆ. ಇದರಿಂದ ಗ್ರಾಮೀಣ ಪ್ರದೇಶದ ತರಕಾರಿ ಮಾರಾಟಗಾರರಿಗೆ ಸ್ಥಳಾವಕಾಶದ ಕೊರತೆ ಉಂಟಾಗಿರುವುದರಿಂದ ಅವರು ಪಟ್ಟಣದ ಎಲ್ಲೆಂದರಲ್ಲಿ ತರಕಾರಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ ಎಂದರು.
ಪುರಸಭೆ ವಿರೋಧ ಪಕ್ಷದ ಮುಖಂಡ ಅಪ್ಪಣಗೌಡ ನಾಯ್ಕರ ಮಾತನಾಡಿ, ನಗರದ ಸ್ವಚ್ಛತೆಗೆ ಪುರಸಭೆಯ ಎಲ್ಲ 23 ಸದಸ್ಯರು ಅಧಿಕಾರಿಗಳಿಗೆ ಬೆಂಬಲ ನೀಡುತ್ತೇವೆ. ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ, ಮುಂಗ್ಗಟ್ಟುಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವಾಗ ಯಾವುದೇ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಫೋನ್ ಮಾಡಬಾರದು ಎಂದರು.
ಸಿಪಿಐ ಮಲ್ಲಯ್ಯ ಮಠಪತಿ ಮಾತನಾಡಿ, ಪಟ್ಟಣದ ಶಿವಾಜಿ ಸರ್ಕಲ್, ಬಸವೇಶ್ವರ ವರ್ತುಲ, ಶ್ರೀರಾಮ ಪೇಟೆ, ಸವದತ್ತಿ ರಸ್ತೆ ಬದಿಗಳಲ್ಲಿ ವಿವಿಧ ತರಕಾರಿ, ಹಣ್ಣು-ಹಂಪಲ ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ನಿತ್ಯವೂ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಗುರುವಾರ ಬೆಳಗ್ಗೆಯಿಂದಲೇ ಎಲ್ಲ ಅನಧಿಕೃತ ತರಕಾರಿ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಮಾರುಕಟ್ಟೆ ಪ್ರದೇಶದಲ್ಲಿ ಒನ್ ವೇ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಪುರಸಭೆಯ ಎಲ್ಲ ಸದಸ್ಯರು ಇದಕ್ಕೆ ಒಮ್ಮತದ ಅಭಿಪ್ರಾಯದಿಂದ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದರಿಂದ ಸಭೆಯಲ್ಲಿದ್ದ ಎಲ್ಲ ಸದಸ್ಯರು, ತರಕಾರಿ ವ್ಯಾಪಾರಸ್ಥರು ಒಪ್ಪಿಗೆ ಸೂಚಿಸಿದರು.
ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ಸಂಗಮೇಶ ಬ್ಯಾಳಿ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಹುಸೇನಸಾಬ ಗೋಟುರ, ಹಸನಸಾಬ ತಹಸೀಲ್ದಾರ್, ಸುನೀಲ ಕುಷ್ಟಗಿ, ಮಹೇಶ ಬೋಳಶೆಟ್ಟಿ, ಬಸು ಪಾಟೀಲ, ಹನುಮಂತ ಹವಾಲ್ದಾರ, ರವಿ ಚಿಂತಾಲ, ವ್ಯಾಪಾರಸ್ಥರು ಉಪಸ್ಥಿತರಿದ್ದರು.