ಜಿಲ್ಲೆ

ಸೋಂಕು ಹೆಚ್ಚಲು ಲಾಕ್​ಡೌನ್ ತೆರವು ಕಾರಣ: ರಾಮಲಿಂಗಾ ರೆಡ್ಡಿ ಆರೋಪ

ಬೆಂಗಳೂರು: ಇಡೀ ದೇಶದಲ್ಲಿ ಲಾಕ್​ಡೌನ್ ತೆರವು ಮಾಡಿದ್ದರಿಂದಲೇ ಕರೊನಾ ಸೋಂಕು ವೇಗವಾಗಿ ಹರಡಲು ಕಾರಣ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವತನಕ ಯಾವುದೇ ಕಾರಣಕ್ಕೂ ಶಾಲೆ, ಕಾಲೇಜುಗಳನ್ನು ತೆರೆಯಬಾರದು. ಶಾಲೆಗಳಲ್ಲಿ ಮಕ್ಕಳಿಂದ ಮಕ್ಕಳಿಗೆ ಬೇಗ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸ್ವಲ್ಪ ದಿನ ಕಾಯುವುದು ಅನಿವಾರ್ಯವಾಗಿದೆ. ಪಾಲಕರು ಸಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ | ರಾಮಲಿಂಗಾರೆಡ್ಡಿ ಮಾಜಿ ಸಚಿವ

ಲಾಕ್​ಡೌನ್ ಘೋಷಣೆ ಸ್ವಾಗತಾರ್ಹ. ಇದನ್ನು ಜಾರಿ ಮಾಡುವಾಗ ತೋರಿದ ತರಾತುರಿಯನ್ನೇ ತೆರವು ಮಾಡುವ ಸಂದರ್ಭದಲ್ಲಿಯೂ ತೋರಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ತರಾತುರಿಯಲ್ಲಿ ಲಾಕ್​ಡೌನ್ ಘೋಷಣೆ ಮಾಡಿದ್ದರಿಂದ ದೈನಂದಿನ ದುಡಿಮೆ ನೆಚ್ಚಿಕೊಂಡಿದ್ದವರಿಗೆ ಎರಡು ಹೊತ್ತಿನ ಊಟಕ್ಕೂ ತೊಂದರೆಯಾಯಿತು. ಸೂಕ್ತ ಪೂರ್ವಸಿದ್ಧತೆ ಮಾಡಿಕೊಂಡಿದ್ದರೆ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ ಎಂದರು.

ಮುಖ್ಯಮಂತ್ರಿಯವರು ನಗರ ಶಾಸಕರ ಸಭೆ ಕರೆದಾಗ ಹಲವು ಸಲಹೆ ಕೊಟ್ಟಿದ್ದೆವು. ಆದರೆ, ಅವರು ನಮ್ಮ ಯಾವ ಸಲಹೆಯನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಕೇಂದ್ರ ಸರ್ಕಾರವೂ ಈ ನೆಲೆಯಲ್ಲಿ ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿಲ್ಲ. ಸೋಂಕು ದಿನೇದಿನೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ಕೈಚೆಲ್ಲಿವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸುತ್ತಿರುವುದು ಸ್ವಾಗತಾರ್ಹ. ಅವರೊಬ್ಬ ಉತ್ತಮ ಸಂಸದೀಯ ಪಟು ಎಂದು ಅವರು ಹೇಳಿದರು.