ಕಾರವಾರ:ರಾಜ್ಯ ಸರ್ಕಾರ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕೊಲೆ ಮಾಡುತ್ತಿದೆ ಎಂದು ರಾಜ್ಯ ಶಿಕ್ಷಕರ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ಎಂ.ಜಿ.ಭಟ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ದುಸ್ಥರ ಪರಿಸ್ಥಿತಿ ಬಂದೊದಗಿದೆ.
9 ವಿಶ್ವ ವಿದ್ಯಾಲಯಗಳನ್ನು ಬಂದ್ ಮಾಡಲು ಯೋಜಿಸಿದೆ. 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದು ಓದುತ್ತಿದ್ದಾರೆ. 340 ಕೋಟಿಗಳ ಹೊರೆ ತಮಗೆ ಬೀಳುತ್ತದೆ ಎಂದು ಸರ್ಕಾರ ವಿವಿಗಳನ್ನು ಬಂದ್ ಮಾಡಿ, ಶಿಕ್ಷಣ ಕ್ಷೇತ್ರದ ಕೊಲೆ ಮಾಡಿದೆ.ಶಿಕ್ಷಣ ಲಾಭ ತರುವ ಉದ್ಯಮವಲ್ಲ. ಹಾಗಾಗಿ ವಿವಿಗಳನ್ನು ಬಂದ್ ಮಾಡುವುದನ್ನು ಬಿಟ್ಟು ಅವುಗಳಿಗೆ ಮೂಲ ಸೌಕರ್ಯ ನೀಡಬೇಕು ಎಂದು ಆಗ್ರಹಿಸಬೇಕು.
ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶದ ಅಸಮಾನತೆ ಕಡಿಮೆಯಾಗಲಿದೆ.
ಗುಣಮಟ್ಟದ ಕೊರತೆ ಇರುವ ಕಾರಣ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ರಾಜ್ಯದಲ್ಲಿ 72 ಸಾವಿರ ಶಿಕ್ಷಕರ ಕೊರತೆ ಇದೆ. ಇದ್ದ ಶಿಕ್ಷಕರ ಮೇಲೆ ಬಿಸಿಯೂಟ ಸೇರಿ ಇತರ ಕೆಲಸಗಳು ಹೆಚ್ಚಿವೆ. ಕಟ್ಟಡದಂಥ ಮೂಲ ಸೌಕರ್ಯ ಕೊರತೆ ಇದೆ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಶಿಕ್ಷಕರು ಬೋಧನೆಯಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳುವಂತೆ ಮಾಡಬೇಕು. ಈ ಬಗ್ಗೆ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಶಿವಾನಂದ ಕದಂ, ಸುಮಾ ಎಲಿಗಾರ್, ಅನಿಲ ಮಡಿವಾಳ, ನಾಗೇಶ ಕುರ್ಡೇಕರ್ ಸುದ್ದಿಗೋಷ್ಠಿಯಲ್ಲಿದ್ದರು.