ಜಿಲ್ಲೆ

ಮೈಸೂರು ವಿವಿ ಕ್ರೀಡಾಪಟುಗಳ ಪದಕ ಬೇಟೆ

Mysuru

ಮೈಸೂರು: 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಮತ್ತು ಪುರುಷರ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರು ವಿವಿ ಕ್ರೀಡಾಪಟುಗಳು ಒಂದು ಚಿನ್ನ ಸೇರಿದಂತೆ ಮೂರು ಪದಕ ಬೇಟೆಯಾಡಿದ್ದಾರೆ.

ಛತ್ತೀಸ್‌ಗಡದ ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಲ್ಲಿ ಒಂದು ಚಿನ್ನ ಮತ್ತು ಕಂಚಿನ ಪದಕ ಪಡೆಯುವ ಮೂಲಕ ಎರಡನೇ ರನ್ನರ್ ಅಪ್ ಗೌರವ ಪಡೆದಿದ್ದಾರೆ.

ಮಹಿಳೆಯರ 45 ಕೆ.ಜಿ. ಕುಮಿತೆ ವಿಭಾಗದಲ್ಲಿ ಎಸ್. ಅಶ್ವಿನಿ ಚಿನ್ನದ ಪದಕ ಪಡೆದರೆ, ಕಟಾ ವಿಭಾಗದಲ್ಲಿ ದಿಯಾ ಎಸ್. ಅರಸ್ ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದ 84 ಕೆ.ಜಿ.ಒಳಗಿನ ಕುಮಿತೆ ವಿಭಾಗದಲ್ಲಿ ಪ್ರೀತಂ ಕಂಚಿನ ಪದಕ ಪಡೆದು ಗಮನ ಸೆಳೆದಿದ್ದಾರೆ.