ಹೊಸಪೇಟೆ: ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿವಿಯು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ಅಧ್ಯಾಪಕರ ಕೊಡುಗೆ ಶ್ಲಾಘನೀಯಗಿದೆ ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಭುವನವಿಜಯ ಸಭಾಂಗಣದಲ್ಲಿ ಬುಧವಾರ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ, ಡಾ.ಡಿ.ಪಾಂಡುರಂಗಬಾಬು ಹಾಗೂ ಡಾ.ಕೆ.ರವೀಂದ್ರನಾಥ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೃತ್ತಿ ಮತ್ತು ಪ್ರವೃತ್ತಿ ಎರಡನ್ನು ಸಂಶೋಧನೆಯನ್ನಾಗಿಸಿಕೊಂಡು, ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಇನ್ನು ಕನ್ನಡ ವಿವಿ ಸರ್ವರಿಗೂ ಮುಕ್ತವಾಗಿದ್ದು, ನಿವೃತ್ತ ಪ್ರಾಧ್ಯಾಪಕರು ಹಾಗೂ ನೌಕರರ ಸೇವೆಗಾಗಿ ವಿವಿ ಸದಾ ತೆರೆದಿರುತ್ತದೆ ಎಂದು ತಿಳಿಸಿದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಉಪಕುಲಸಚಿವ ಡಾ.ಎ.ವೆಂಕಟೇಶ, ಸಹಾಯಕ ಕುಲಸಚಿವ ಗುರುಬಸಪ್ಪ, ಪ್ರಾಧ್ಯಾಪಕರಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಚಲುವರಾಜು, ಜ್ಯೋತಿ ಇತರರಿದ್ದರು.