ಜಿಲ್ಲೆ

ಗಣೇಶೋತ್ಸವದಿಂದ ಒಗ್ಗಟ್ಟು ಬೆಳೆಯಲಿದೆ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಗ್ರಾಮೀಣ ಭಾಗದಲ್ಲಿ ಗಣೇಶೋತ್ಸವವನ್ನು ಎಲ್ಲರೂ ಒಗ್ಗೂಡಿ ಆಚರಿಸುವುದರಿಂದ ಒಗ್ಗಟ್ಟು ಬೆಳೆಯಲಿದೆ ಎಂದು ಬಿ.ಕಣಬೂರು ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್ ಹೇಳಿದರು.
ಪಟ್ಟಣದ ಪೇಟೆಕೆರೆಯ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 17ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಗಣೇಶೋತ್ಸವವು ಒಗ್ಗಟ್ಟು, ಏಕತೆ ಸಂಕೇತವಾಗಿದ್ದು, ಗ್ರಾಮೀಣ ಜನರು ತಮ್ಮ ಕೆಲಸದ ಒತ್ತಡದ ನಡುವೆ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಒತ್ತಡ ನಿವಾರಣೆಯಾಗುವುದರೊಂದಿಗೆ ಧಾರ್ಮಿಕತೆಯಲ್ಲಿ ಶ್ರದ್ಧೆ ಹೊಂದಿದ ಕೀರ್ತಿ ಲಭಿಸಲಿದೆ ಎಂದರು.
ನಿವೃತ್ತ ಶಿಕ್ಷಕ ಎ.ಆರ್.ವೆಂಕಟೇಶ್ ಮಾತನಾಡಿ, ಗ್ರಾಮೀಣ ಜನರ ಇಂತಹ ಆಚರಣೆಗಳಿಂದಲೇ ಧರ್ಮ, ಸಂಸ್ಕೃತಿ, ಕಲೆ ಉಳಿದು ಬೆಳೆಯಲು ಸಾಧ್ಯವಿದೆ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಸ್ವಪ್ನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ನಂದೀಶ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜ್ ಭಟ್, ಗ್ರಾಮದ ಪ್ರಮುಖರಾದ ಶೇಖರ, ಉದ್ದಯ್ಯ, ಶ್ರೀಕಾಂತ್, ದಿವಾಕರ್, ರವೀಂದ್ರ, ಸಂದೀಪ್, ಸಾಗರ್, ಕಿರಣ್, ಶರಣ್, ಚಂದ್ರು ಮತ್ತಿತರರು ಹಾಜರಿದ್ದರು.