ಸೋಮವಾರಪೇಟೆ: ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ, ಬಡವರಿಗೆ, ಆದಿವಾಸಿಗಳಿಗೆ ಸರ್ಕಾರ ನಿವೇಶನ ಕಲ್ಪಿಸಬೇಕೆಂದು ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ವತಿಯಿಂದ ಸೋಮವಾರಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು.
ಯೂನಿಯನ್ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ನೇತ್ರತ್ವದಲ್ಲಿ ಪ್ರತಿಭಟನಾಕಾರರು ವಿವೇಕಾನಂದ ಸರ್ಕಲ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜೇಸಿ ವೇದಿಕೆಯಲ್ಲಿ ಧರಣಿ ನಡೆಸಿದರು.
ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರು ಸ್ವಂತ ನಿವೇಶನವಿಲ್ಲದೆ ಮಾಲೀಕರ ಲೈನ್ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಮಾದಾಪುರ, ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಗುರುತಿಸಿ ಕಂದಾಯ ಇಲಾಖೆಗೆ ತಿಳಿಸಲಾಗಿದೆ ಆದರೆ ಇದುವರೆಗೆ ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ ಎಂದು ಸೋಮಪ್ಪ ದೂರಿದರು. ಜಿಲ್ಲೆಯಲ್ಲಿರುವ ಪೈಸಾರಿ ಜಾಗ ಉಳ್ಳವರ ಪಾಲಾಗುತ್ತಿದೆ. ಸ್ವಾತಂತ್ರೃ ಸಿಕ್ಕಿ 7 ದಶಕಗಳು ಕಳೆದರೂ ಕಾರ್ಮಿಕರಿಗೆ ವಾಸಕ್ಕೆ ಮನೆ ಕೊಡದ ಸರ್ಕಾರಗಳಿಗೆ ಧಿಕ್ಕಾರವಿರಲಿ ಎಂದರು.
ಜಿಲ್ಲೆಯಲ್ಲಿ ಕಾಡಾನೆ, ಹುಲಿದಾಳಿಗೆ ಕಾರ್ಮಿಕರು ಜೀವ ಕೊಡುತ್ತಿದ್ದಾರೆ. ಕೆಲವು ಸಂದರ್ಭ ಕಾಡಾನೆ ದಾಳಿಯಿಂದ ಗಾಯಗೊಂಡ ಕಾರ್ಮಿಕರಿಗೆ ಪರಿಹಾರವನ್ನು ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದಲಿತ ಹಿತರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಹೋರಾಟ, ಚಳುವಳಿ ಮಾಡದಿದ್ದರೆ ಕಾರ್ಮಿಕರು, ಆದಿವಾಸಿಗಳು ಬದುಕಲು ಸಾಧ್ಯವಿಲ್ಲ. ಬೆವರು, ರಕ್ತ ಸುರಿಸಿ ಕಾಫಿ, ಭತ್ತ, ಕಾಳುಮೆಣಸು ಉತ್ಪಾದನೆ ಕೊಡುಗೆ ನೀಡಿದ್ದಾರೆ. ಸರ್ಕಾರಕ್ಕೆ ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಧ್ಯವಾಗಿಲ್ಲ. ಇದ್ದ ಪೈಸಾರಿ ಜಾಗವನ್ನು ಭೂಮಾಲೀಕರಿಗೆ ಲೀಜ್ ಕೊಡುತ್ತಿದ್ದಾರೆ. ಮಾಲೀಕರ ಹಂದಿಗೂಡಿನಂತಿರುವ ಲೈನ್ ಮನೆಗಳಲ್ಲಿ ಕಾರ್ಮಿಕರು ಪ್ರಾಣಿಗಳಂತೆ ಬದುಕಬೇಕಾಗಿದೆ. ರಾಜಕೀಯ ಪಕ್ಷಗಳು ಕಾರ್ಮಿಕ ಯುವಕರಿಗೆ ಕೋಮು ವಿಷ ಬೀಜಬಿತ್ತಿ ದಾರಿ ತಪ್ಪಿಸಿದ್ದಾರೆ. ಕಾರ್ಮಿಕರು ಒಗ್ಗಟ್ಟಾಗದಿದ್ದರೆ ಎಲ್ಲವನ್ನು ಕಳೆದುಕೊಂಡು ಬೀದಿ ಪಾಲಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಸುಶೀಲಾ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಿವೇಶನ ರಹಿತ ಕಾರ್ಮಿಕರ ಸಭೆ ಕರೆದು ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಶಬಾನ, ಕಾರ್ಮಿಕ ಮುಖಂಡ ಪಿ.ಟಿ.ಸುಂದರ, ಸೋಮ, ಶೇಷಪ್ಪ, ಗಣೇಶ್ ಮತ್ತಿತರರು ಇದ್ದರು.