ಜಿಲ್ಲೆ

ಯಕ್ಷಗಾನ ಕ್ಷೇತ್ರದಲ್ಲಿ ಹಂದೆ, ಉಡುಪರ ಸೇವೆ ಅನನ್ಯ

ವಿಜಯವಾಣಿ ಸುದ್ದಿಜಾಲ ಕೋಟ

ಯಕ್ಷಗಾನ ಕಲೆ ಉಳಿದು ಬೆಳೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸರ್ಕಾರದಿಂದ ಬರುವ ಎಲ್ಲ ರೀತಿಯ ಅನುದಾನದ ಜೊತೆಗೆ ಈ ಭಾಗದ ಜನಪ್ರತಿನಿಧಿಗಳಾಗಿ ನೆರವು ನೀಡಲು ಸಿದ್ಧರಿದ್ದೇವೆ. ಶ್ರೀಧರ ಹಂದೆ ಮತ್ತು ಕಾರ್ಕಡ ಶ್ರೀನಿವಾಸ ಉಡುಪರ ಸಾಲಿಗ್ರಾಮ ಮಕ್ಕಳ ಮೇಳ ಐವತ್ತು ವರ್ಷಗಳ ಸಾರ್ಥಕ ಇತಿಹಾಸವನ್ನು ಸೃಷ್ಟಿಸಿರುವುದು ಅಭಿನಂದನೀಯ. ಈ ಕಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಕಾಡೆಮಿ, ಉಡುಪಿ ಕಲಾರಂಗದ ಚಟುವಟಿಕೆಗಳು ಸ್ಮರಣೀಯವಾದುದು ಎಂದು ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕುಮಾರ ಕೊಡ್ಗಿ ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕೋಟ ಮೂರ‌್ಕೈ ಹಂದೆ ಮಹಾವಿಷ್ಣು ವಿನಾಯಕ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ ಎರಡು ದಿನಗಳ ಆಹ್ವಾನಿತ ತಂಡಗಳ ಯಕ್ಷ ತ್ರಿವಳಿ ಯಕ್ಷೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಲಿ ಕಡೆಕಾರ್, ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳ ಸ್ಥಾಪಕ ನಿರ್ದೇಶಕ ಎಚ್.ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ, ಟ್ರಸ್ಟಿ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು. ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಗುರು ದೇವದಾಸ ಕೂಡ್ಲಿ ಅವರಿಗೆ ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್.ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ರಾಘವ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ವಂದಿಸಿದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಲಾ ಪೀಠ ಕೋಟ ತಂಡದಿಂದ ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ಮೈಂದ ದ್ವಿವಿಧ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.