ಜಿಲ್ಲೆ

ಪರಿಸರ ಪ್ರಿಯರಿಂದ ಹಣ್ಣುಗಳ ಬೀಜ ಸಂಗ್ರಹಿಸುವ ವಿಶಿಷ್ಟ ಸ್ಪರ್ಧೆ!

reportermng

ಮಂಗಳೂರು: ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಏನೇನೂ ಮಾಡಲಾಗದೆ ಸಮಯ ವ್ಯರ್ಥ ಮಾಡಿದವರು ನಮ್ಮಲ್ಲಿ ಹಲವು ಮಂದಿ ಇದ್ದಾರೆ. ಆದರೆ ಈ ಸಮಯವನ್ನು ಸದುಪಯೋಗಪಡಿಸಿಕೊಂಡ ವಿಷಯವಿದು.
ರಾಷ್ಟ್ರ ಮಟ್ಟದ ‘ಹಣ್ಣುಗಳ ಬೀಜ ಸಂಗ್ರಹ ಸ್ಪರ್ಧೆ’ಯನ್ನು ಯಶಸ್ವಿಯಾಗಿ ಸಂಘಟಿಸಿದೆ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್). ಮಕ್ಕಳಲ್ಲಿ ಪ್ರಕೃತಿ ಪ್ರೀತಿ ಬೆಳೆಸುವ ಉದ್ದೇಶದಿಂದ ಮತ್ತು ಮರಗಿಡಗಳ ಜಾಗೃತಿಯ ದೂರ ದೃಷ್ಟಿಯನ್ನಿಟ್ಟುಕೊಂಡು ಆಯೋಜಿಸಿದ ಸ್ಪರ್ಧೆಯಿದು. ಅಪರೂಪದ ಕಾಡಿನ ಹಣ್ಣಿನ ಬೀಜಗಳನ್ನು ಸಂಗ್ರಹಿಸುವುದು ಇದರ ಗುರಿ.
ಈ ಸ್ಪರ್ಧೆಗೆ ಭಾರೀ ನಗದು ಮೊತ್ತದ ಜೊತೆಗೆ ಒಟ್ಟು 12 ಪ್ರೋತ್ಸಾಹಕ ಬಹುಮಾನವನ್ನು ನಿಗದಿಪಡಿಸಲಾಗಿತ್ತು. ಪ್ರಥಮ ಬಹುಮಾನವಾಗಿ 10 ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ 4 ಸಾವಿರ ಮತ್ತು ಮೂರನೇ ಬಹುಮಾನ ಪಡೆದ ಮಕ್ಕಳಿಗೆ 2 ಸಾವಿರ ರೂ. ಹಾಗೂ ಪ್ರಮಾಣಪತ್ರ ಸಿಗಲಿದೆ.
ಯುನಿವರ್ಸಲ್ ನಾಲೆಡ್ಜ್ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್)ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಸ್ಪರ್ಧೆಗೆ ನಾಡಿನ ಎಲ್ಲೆಡೆಯಿಂದ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ಸುಮಾರು 400 ಮಕ್ಕಳು ಉತ್ತಮ ಪ್ಯಾಕ್‌ನೊಂದಿಗೆ ಅಪರೂಪದ ಕಾಡಿನ ಹಣ್ಣಿನ ಬೀಜಗಳನ್ನು ಕಳುಹಿಸುವ ಮೂಲಕ ಸ್ಪರ್ಧೆಯ ಮಹತ್ವ ಹೆಚ್ಚಿಸಿದ್ದಾರೆ.
ರಾಷ್ಟ್ರ ಮಟ್ಟದ ಬೀಜ ಸಂಗ್ರಹ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರ್ನಾಟಕ, ಕೇರಳ ಮಹಾರಾಷ್ಟ್ರ ಸೇರಿದಂತೆ ಹಲವೆಡೆಯಿಂದ ಮಕ್ಕಳು ಪಾಲ್ಗೊಂಡಿರುವುದು ಖುಷಿ ತಂದಿದೆ. ಹಣ್ಣುಗಳನ್ನು ತಿಂದು ಹೆಚ್ಚಿನವರು ಅದರ ಬೀಜವನ್ನು ಬಿಸಾಡುತ್ತಾರೆ. ಮಕ್ಕಳಿಗೆ ಯಾವ ಹಣ್ಣಿನ ಬೀಜ ಯಾವುದು ಎಂಬ ಪರಿಚಯವೇ ಇರುವುದಿಲ್ಲ. ಮಕ್ಕಳಲ್ಲಿ ಜಾಗೃತಿಗಾಗಿ ಈ ಸ್ಪರ್ಧೆ ಆಯೋಜಿಸಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಎನ್‌ಇಸಿಎಫ್‌ನ ಶಶಿಧರ ಶೆಟ್ಟಿ ತಿಳಿಸುತ್ತಾರೆ.
ವಿಜೇತರು: ರಾಷ್ಟ್ರ ಮಟ್ಟದ ಬೀಜ ಸಂಗ್ರಹ ಸ್ಪರ್ಧೆಯಲ್ಲಿ ಒಟ್ಟು 400 ಮಕ್ಕಳು ಪಾಲ್ಗೊಂಡಿದ್ದು, ಶಿರಸಿ ಸಿದ್ಧಾಪುರದ ಶ್ರೇಯಾ ಹೆಗ್ಡೆ ಪ್ರಥಮ, ಉಡುಪಿಯ ಭಾಗ್ಯಲಕ್ಷ್ಮೀ ದ್ವಿತೀಯ ಮತ್ತು ಮಂಗಳೂರಿನ ಜಾನ್ಸನ್ ಡಿ’ಸೋಜ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.‌
ಮುಂದಿನ ವರ್ಷ ಗ್ರೀನ್ ಪಂಚಾಯಿತಿ
ಎನ್‌ಇಸಿಎಫ್ ನೇತೃತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಪಶ್ಚಿಮ ಘಟ್ಟ ಹಸಿರು ಹೊದಿಕೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ. ಇದರ ಮುಂದಿನ ಅಂಗವಾಗಿ ಜಿಲ್ಲೆಯ ಎಲ್ಲಾ 223 ಪಂಚಾಯಿತಿ ವ್ಯಾಪ್ತಿಯಲ್ಲಿ ಹಣ್ಣಿನ ಗಿಡಗಳನ್ನು ನೆಡುವ ‘ಗ್ರೀನ್ ಪಂಚಾಯಿತಿ’ ಯೋಜನೆ ಹಾಕಿಕೊಂಡಿದ್ದೇವೆ. ನಮ್ಮ ಸಂಘಟನೆ ವತಿಯಿಂದ ತಲಾ 500 ಗಿಡಗಳನ್ನು ನೆಡಲಾಗುವುದು, ಅಲ್ಲದೆ ಇಲಾಖೆಯ ವತಿಯಿಂದಲೂ ಗಿಡಗಳನ್ನು ನೆಡಿಸುವ ಪ್ರಯತ್ನ ಮಾಡಲಾಗುವುದು. ಒಟ್ಟು 1.16 ಲಕ್ಷ ಗಿಡಗಳನ್ನು ನೆಡುವ ಉದ್ದೇಶವಿದೆ. ಬಳಿಕ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲೂ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆ ಹಾಕಿಕೊಳ್ಳಲಾಗುವುದು. ನಮ್ಮ ಪರಿಸರ ಪ್ರೇಮಿ ಸ್ವಯಂಸೇವಕರೇ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದು ಶಶಿಧರ ಶೆಟ್ಟಿ ತಿಳಿಸಿದ್ದಾರೆ.

ಪ್ರಥಮ ಬಹುಮಾನ ಗಳಿಸಿದ ಶ್ರೇಯಾ ಹೆಗ್ಡೆ
ದ್ವಿತೀಯ ಬಹುಮಾನ ವಿಜೇತೆ ಭಾಗ್ಯಲಕ್ಷ್ಮಿ
ತೃತೀಯ ಬಹುಮಾನ ವಿಜೇತ ಜಾನ್ಸನ್