ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಬೇಡಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶಿಷ್ಟ ತೆಂಗಿನ ಮರಗಳ ಸಂರಕ್ಷಣೆ ಮತ್ತು ವಿಸ್ತರಣೆಗಾಗಿ ಬೇಡಡ್ಕ ಗ್ರಾಮ ಪಂಚಾಯಿತಿ, ಕಾರಡ್ಕ ಬ್ಲಾಕ್ ಮತ್ತು ಕಾಸರಗೋಡು ಜಿಲ್ಲಾ ಪಂಚಾಯಿತಿ ಹಲವು ವರ್ಷಗಳಿಂದ ಜಂಟಿಯಾಗಿ ಆಯೋಜಿಸಿದ ಯೋಜನೆಯೊಂದು ಕಾರ್ಯರೂಪಕ್ಕೆ ಬರಲಾರಂಭಿಸಿದೆ.
ಬೇಡಡ್ಕದ ತೆಂಗಿನ ಸಸಿಗಳು ಹೊಂದಿರುವ ಗುಣಮಟ್ಟದಿಂದ ಇತರ ಜಿಲ್ಲೆಗಳಲ್ಲೂ ಹೆಚ್ಚಿನ ಬೇಡಿಕೆಯಿರಿಸಿಕೊಂಡಿದ್ದು, ಇದುವರೆಗೆ 3500ಕ್ಕೂ ಹೆಚ್ಚಿನ ಸಸಿಗಳು ಇತರ ಜಿಲ್ಲೆಗಳಿಗೆ ರವಾನೆಯಾಗಿದೆ. ಬೀಜದ ತೆಂಗಿನಕಾಯಿಗಳ ಸಂಗ್ರಹ, ತೆಂಗಿನ ಸಸಿಗಳ ತಯಾರಿ, ಅವುಗಳ ಪೋಷಣೆಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಗುಣಮಟ್ಟದ ತೆಂಗಿನ ಸಸಿಗಳ ಉತ್ಪಾದನೆ ಸಾಧ್ಯವಾಗುತ್ತಿದ್ದು, ಇಲ್ಲಿಂದ ವಿವಿಧ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ. ತೆಂಗಿನ ಕೃಷಿಯಲ್ಲಿ ಮೂಲ ಅಂಶವನ್ನೊಳಗೊಂಡ, ಗುಣಮಟ್ಟದ ತೆಂಗಿನ ಸಸಿಗಳು ಸಿಗದಿರುವುದು ರೈತರ ಮುಂದಿರುವ ದೊಡ್ಡ ಸವಾಲಾಗಿದ್ದು, ಬೇಡಡ್ಕ ತಳಿ ಇದಕ್ಕೆ ಪರಿಹಾರವಾಗುವ ಸಾಧ್ಯತೆ ಕಂಡುಬರಲಾರಂಭಿಸಿದೆ.
ಕಾಸರಗೋಡಿನ ಬೇಡಡ್ಕ, ಮುನ್ನಾಡ್ ಮತ್ತು ಕೊಳತ್ತೂರು ಭಾಗದ ರೈತರು ಸಾಂಪ್ರದಾಯಿಕವಾಗಿ ತೆಂಗಿನಕಾಯಿಗಳನ್ನು ಸಂಗ್ರಹಿಸಿ ಇವುಗಳಿಂದ ಸಸಿ ತಯಾರಿಸುತ್ತಿದ್ದಾರೆ. ಹೆಚ್ಚಿನ ಇಳುವರಿ ನೀಡುವ ಈ ತಳಿಯು ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಂಡಿರುವುದು ಮತ್ತು ಕನಿಷ್ಠ ನಿರ್ವಹಣೆಯೊಂದಿಗೆ ಅತ್ಯುತ್ತಮ ಇಳುವರಿ ನೀಡುತ್ತದೆ. ಯೋಜನೆಯ ಯಶಸ್ಸಿಗೆ ರೈತರನ್ನು ಸಿದ್ಧಪಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ರೈತರನ್ನು ತೊಡಗಿಸಿಕೊಳ್ಳಲು ವಿಶೇಷ ನೋಂದಣಿಯನ್ನೂ ಜಾರಿಗೊಳಿಸಲಾಗುತ್ತಿದೆ.
ರೈತರಿಗಾಗಿ ಈಗಾಗಲೇ ಗುಣಮಟ್ಟದ ಬೇಡಡ್ಕ ತೆಂಗಿನ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಹೆಚ್ಚಿನ ರೈತರು ಈ ಯೋಜನೆಯ ಸದಸ್ಯರಾಗಿದ್ದಾರೆ. ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಲಾಭದಾಯಕ ತೆಂಗಿನ ಕೃಷಿಯನ್ನು ಉತ್ತೇಜಿಸುವ ಮೂಲಕ ತೆಂಗು ಕೃಷಿಯ ಭವಿಷ್ಯವನ್ನು ಬಲಪಡಿಸಿ, ರೈತರಲ್ಲಿ ಉತ್ತಮ ಭರವಸೆಯನ್ನು ಯೋಜನೆ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ರೈತ ಗುಂಪುಗಳು ಈ ಉಪಕ್ರಮವನ್ನು ಹೆಚ್ಚಿನ ರೈತರಿಗೆ ವಿಸ್ತರಿಸಲು ಮತ್ತು ಬೇಡಡ್ಕ ತೆಂಗಿನಕಾಯಿಯ ಜನಪ್ರಿಯತೆಯನ್ನು ಹೆಚ್ಚಿಸಲೂ ಯೋಜನೆಯ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.
ಅರಿವು ಮೂಡಿಸಲು ತರಬೇತಿ
ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಬೇಡಡ್ಕ ತೆಂಗಿನ ಬಗ್ಗೆ ಅರಿವು ಮತ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚಾರಿಟೆಬಲ್ ಸೊಸೈಟಿಗಳ ಕಾಯ್ದೆಯಡಿಯನ್ವಯ ರೈತರ ಗುಂಪುಗಳನ್ನು ನೋಂದಾಯಿಸಲು ಮತ್ತು ಗುಣಮಟ್ಟದ ಬೇಡಡ್ಕ ತಳಿಯ ತೆಂಗಿನಕಾಯಿಯನ್ನು ರೈತಸ್ನೇಹಿ ತಳಿಯಾಗಿ ಅಧಿಕೃತವಾಗಿ ನೋಂದಾಯಿಸಲೂ ಇಲ್ಲಿ ಕ್ರಮ ಜರುಗಿಸಲಾಗಿದೆ. ಬೀಜದ ತೆಂಗಿನಕಾಯಿ ಸಂಗ್ರಹಣೆ, ತೆಂಗಿನ ನಾಟಿ ಮತ್ತು ಮೊಳಕೆ ನಿರ್ವಹಣೆಯ ಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಗುತ್ತದೆ.
ಬೇಡಡ್ಕ ತಳಿಯ ತೆಂಗನ್ನು ಸಂರಕ್ಷಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಬೇಡಡ್ಕ ತಳಿಯ ತೆಂಗಿನ ಉತ್ಪಾದಕತೆಯ ಸುಧಾರಣೆಯು ರೈತ ಸಮುದಾಯದಲ್ಲಿ ಭರವಸೆ ಮೂಡಿಸುತ್ತಿದೆ. ಸುಸ್ಥಿರ ಅನನ್ಯ ತಳಿಗಳ ಸಂರಕ್ಷಣೆ ಮತ್ತು ವಿಸ್ತರಣೆ ಈ ಯೋಜನೆಯ ಮತ್ತೊಂದು ವೈಶಿಷ್ಟೃ. ಧನ್ಯಾ ಕೆ, ಅಧ್ಯಕ್ಷೆ, ಬೇಡಡ್ಕ ಗ್ರಾಮ ಪಂಚಾಯಿತಿ