ಜಿಲ್ಲೆ

ರೈಲ್ವೆ ಖಾಸಗೀಕರಣಕ್ಕೆ ಯೂನಿಯನ್ ವಿರೋಧ

Dharwad

ಹುಬ್ಬಳ್ಳಿ: ರೈಲ್ವೆ ಉತ್ಪಾದನಾ ಘಟಕಗಳ ಖಾಸಗೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ವತಿಯಿಂದ ಗದಗ ರಸ್ತೆಯ ರೈಲು ಸೌಧ ಆವರಣದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ದೇಶಾದ್ಯಂತ ಯೂನಿಯನ್ ಕರೆ ನೀಡಿದ್ದ ‘ಗಮನ ಸೆಳೆಯುವ ದಿನ’ ಹೆಸರಿನ ಪ್ರತಿಭಟನೆಯಲ್ಲಿ ನೂರಾರು ನೌಕರರು, ಕಾರ್ವಿುಕರು ಪಾಲ್ಗೊಂಡಿದ್ದರು. ಜಿಎಂ ಕಚೇರಿ ಅಧಿಕಾರಿಗಳ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಪತ್ರ ರವಾನಿಸಿದರು.

ಈ ವೇಳೆ ವಲಯ ಅಧ್ಯಕ್ಷ ಎಸ್.ಎಫ್. ಮಲ್ಲಡ ಮಾತನಾಡಿ, ಅಂಬಾನಿ ರೈಲುಗಳು ಈಗ ಕೇವಲ ಹಳಿ ಮೇಲೆ ಓಡುತ್ತಿವೆ. ಮುಂದೆ ಕಾರ್ವಿುಕರ ಮೇಲೆ ಓಡಿದರೂ ಅಚ್ಚರಿ ಇಲ್ಲ. ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಗಲಾಟೆಗೆ ಕೇಂದ್ರ ಸರ್ಕಾರದ ಕುಮ್ಮಕ್ಕೇ ಕಾರಣ. ಇದೇ ರೀತಿ ಭವಿಷ್ಯದಲ್ಲಿ ರೈಲ್ವೆ ಕಾರ್ವಿುಕರ ಮೇಲೆ ನಡೆಯಬಹುದು ಎಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಜ್ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ಮೂರು ಕಂತುಗಳ ಡಿಎ, ಡಿಆರ್​ಅನ್ನು ಬಿಡುಗಡೆ ಮಾಡಬೇಕು. ಹೊಸ ಪೆನ್ಶನ್ ಪದ್ಧತಿ ರದ್ದುಗೊಳಿಸಿ, ಗ್ಯಾರಂಟಿ ಪೆನ್ಶನ್ ಪದ್ಧತಿ ಜಾರಿಗೊಳಿಸಬೇಕು. ಕರೊನಾದಿಂದ ಮೃತಪಟ್ಟ ನೌಕರರ ಪರಿಹಾರವನ್ನು ಶೀಘ್ರವಾಗಿ ನೀಡಬೇಕು. ಜನವರಿ 31 ಮತ್ತು ಜೂನ್ 30ರಂದು ನಿವೃತ್ತರಾಗುವ ನೌಕರರಿಗೆ ಒಂದು ಇನ್ಕ್ರಿಮೆಂಟ್, ರಾತ್ರಿ ಕರ್ತವ್ಯ ಮಾಡುವವರಿಗೆ ರಾತ್ರಿ ಭತ್ಯೆ ಕೊಡಬೇಕು ಎಂದರು.

ಯೂನಿಯನ್ ವಲಯ ಖಜಾಂಚಿ ವಿ.ಇ ಚಾರಖಾನಿ, ವಿಭಾಗೀಯ ಅಧ್ಯಕ್ಷ ಪಿ.ರಂಗಪ್ಪ, ಮಂಡಲ ಕಾರ್ಯದರ್ಶಿ ಕೆ.ವಿ ರಾಘವೇಂದ್ರ, ಎಸ್.ಪಿ ಉಮಾಶಂಕರ, ಕೆ.ವೆಂಕಟೇಶ, ಜಯಲಕ್ಷ್ಮೀ, ವಿ.ಅಶೋಕಕುಮಾರ, ಸಿ.ಮುರುಗನ್, ಪ್ರವೀಣ ಪಾಟೀಲ, ಜಾಕೀರ ಸನದಿ, ಮತ್ತಿತರರು ಇದ್ದರು.