ಜಿಲ್ಲೆ

ಪಂಢರಪುರಕ್ಕೆ ವಿಶೇಷ ರೈಲು ಕಾಗೇರಿ ಮನವಿಗೆ ಕೇಂದ್ರ ಸಚಿವ ವೈಷ್ಣವ್ ಸ್ಪಂದನೆ

ಶಿರಸಿ: ವಾರಕರಿ ಸಂಪ್ರದಾಯದವರು ಪಂಢರಪುರ ವಾರಿ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಹಿನ್ನೆಲೆಯಲ್ಲಿ ಯಶವಂತಪುರ -ಪಂಢರಪುರ ಎಕ್ಸ್​ಪ್ರೆಸ್ ರೈಲನ್ನು (ಸಂಖ್ಯೆ-16541) ವಾರಕ್ಕೊಮ್ಮೆ ಬದಲಾಗಿ ಜೂನ್ 25ರಿಂದ ಜುಲೈ 30ರ ವರೆಗೆ ಪ್ರತಿ ನಿತ್ಯ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂಬ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಕ್ಷಣ ಸ್ಪಂದಿಸಿದ್ದಾರೆ.

ನವದೆಹಲಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು. ಜೂ. 25ರಿಂದ ಜು. 30ರ ವರೆಗೆ ರೈಲು ಪ್ರತಿ ದಿನ ಚಲಿಸಿದರೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಆದ್ದರಿಂದ ಈ ಮನವಿ ಪರಿಗಣಿಸಿ ಯಶವಂತಪುರ ಎಕ್ಸ್​ಪ್ರೆಸ್ ರೈಲು ಸೇವೆಯನ್ನು ನಿತ್ಯ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ವಿನಂತಿಸಿದರು.

ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಈ ಬಗ್ಗೆ ಕೂಡಲೆ ಅಧಿಕಾರಿಗಳ ಜೊತೆ ಮಾತನಾಡಿ, ಹುಬ್ಬಳ್ಳಿಯಿಂದ ಪಂಢರಪುರಕ್ಕೆ ಜೂನ್ 28 ಹಾಗೂ 29ರಂದು ವಿಶೇಷ ರೈಲ್ವೆ ಪ್ರಯಾಣಿಸಲಿದೆ ಎಂಬ ಭರವಸೆ ನೀಡಿ, ಅಧಿಕೃತ ಪ್ರಕಟಣೆ ಹೊರಡಿಸಿದರು.

ಈ ಮೊದಲು ನಿಟ್ಟೂರಿನ ರಮೇಶ್ ಎಸ್. ನಾರ್ವೆಕರ್ ಮತ್ತು ಖಾನಾಪುರದ ಶಾಂತಾರಾಮ ಗಂಗಾರಾಮ ಹೆಬ್ಬಾಳ್ಕರ್ ಅವರು, ಹುಬ್ಬಳ್ಳಿಯಿಂದ ಪಂಢರಪುರಕ್ಕೆ ರೈಲು ಸೇವೆಯ ಸಮಸ್ಯೆ ಕುರಿತು ವಾರಕರಿಯ ಸಂಪ್ರದಾಯದ ಜನರ ಪರವಾಗಿ ಕಾಗೇರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಗೇರಿ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿ, ರೈಲಿನ ಅಗತ್ಯತೆಯನ್ನು ಮನದಟ್ಟು ಮಾಡಿದರು. ತಮ್ಮ ಮನವಿಗೆ ಸ್ಪಂದಿಸಿದ ಸಚಿವರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ಸಲ್ಲಿಸಿದ್ದಾರೆ.