ಜಿಲ್ಲೆ

ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ ಸಿಬಿಐಗೆ ವಹಿಸಿ

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಆಗ್ರಹ

ಆರೋಪಿ ರನ್ಯಾಗೆ ಅಧಿಕಾರಿಗಳಿಂದಲೇ ಎಸ್ಕಾರ್ಟ್​

ವಿಜಯವಾಣಿ ಸುದ್ದಿಜಾಲ ಉಡುಪಿ

ದುಬೈನಿಂದ ಗೋಲ್ಡ್​ ಸ್ಮಗ್ಲಿಂಗ್​ ಪ್ರಕರಣದಲ್ಲಿ ಆರೋಪಿ ರನ್ಯಾ ರಾವ್​ಗೆ ರಾಜ್ಯ ಸರ್ಕಾರದ ಅಧಿಕಾರಿಗಳೇ ಎಸ್ಕಾರ್ಟ್​ ಕೊಟ್ಟಿದ್ದಾರೆ. ಪ್ರೋಟೋಕಾಲ್​ ವ್ಯವಸ್ಥೆ ಮಾಡಿ ತಪಾಸಣೆ ಇಲ್ಲದೆ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರೂ ಕೇಳಿಬರುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್​ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಆಗ್ರಹಿಸಿದರು.

ಉಡುಪಿಯಲ್ಲಿ ಮಾ.15ರಂದು ಮಾಧ್ಯಮದವರೊಂದಿಗೆ ಮಾತನಾಡಿ, ಗೃಹ ಸಚಿವ ಪರಮೇಶ್ವರ್​ ಅವರು ಈ ಪ್ರಕರಣವನ್ನು ಮೊದಲು ಸಿಐಡಿ ತನಿಖೆಗೆ ಕೊಟ್ಟರು. ರಾಮಚಂದ್ರ ರಾವ್​ ಡಿಜಿಐ ಆಗಿದ್ದಾರೆ ಎಂದು ಅಡಿಷನಲ್​ ಚೀಫ್​ ಸೆಕ್ರೆಟರಿಗೆ ಕೊಟ್ಟಿದ್ದೇವೆ ಎನ್ನುತ್ತಾರೆ. ಕಸ್ಟಮ್​ ತಪ್ಪಿಸಿ ಪ್ರೋಟೋಕಾಲ್​ ಮೂಲಕ ಹೇಗೆ ಕರೆತಂದಿರಿ? ಭಾರತ ಸರ್ಕಾರದ ಗುಪ್ತಚರ ಇಲಾಖೆ ಬರುವವರೆಗೆ ನಿಮ್ಮ ಇಂಟೆಲಿಜೆನ್ಸ್​ ಏನು ಮಾಡುತ್ತಿತ್ತು? ಇಂತಹ ಅನೇಕ ಪ್ರಶ್ನೆಗಳಿವೆ. ಸ್ಮಗ್ಲಿಂಗ್​ನ ಬಂಗಾರ, ಅಂತಹ ಹಣಗಳು ಸಮಾಜ ವಿದ್ರೋಹಿ ಕೃತ್ಯಕ್ಕೆ ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ರೂಪಾಯಿ ಚಿಹ್ನೆ ಮೋದಿಯದ್ದಾ?

ತಮಿಳುನಾಡಿನಲ್ಲಿ ರೂಪಾಯಿ ಚಿಹ್ನೆ ನಿರಾಕರಿಸಿದ ಡಿಎಂಕೆ ಸಿಎಂ ಸ್ಟಾಲಿನ್​ ಕ್ರಮ ದುರ್ದೈವವೇ ಸರಿ. ಅದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ರೂಪಾಯಿ ಸಿಂಬಲ್​ ಮಾಡಿದ್ದು ಮೋದಿಯೇ? ಅದು ಬಿಜೆಪಿಯದ್ದೇ? ಆ ಚಿಹ್ನೆ ಕಾಂಗ್ರೆಸ್​ ಸರ್ಕಾರ ಇದ್ದಾಗಲೇ ಮಾಡಿದ್ದಲ್ಲವೇ? ಕಾಂಗ್ರೆಸ್​ನ ಚಿದಂಬರಂ ಆಗ ವಿತ್ತ ಸಚಿವರಾಗಿದ್ದರು. ಎ.ರಾಜಾ, ದಯಾನಿಧಿ ಮಾರನ್​ ಸೇರಿದಂತೆ ಅನೇಕರು ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಯಾಕೆ ಈ ತೀಮಾರ್ನ ತೆಗೆದುಕೊಂಡಿದ್ದೆಂದು ಸ್ಪಷ್ಟಪಡಿಸಿ. ಕಾಂಗ್ರೆಸ್​ ಮತ್ತು ಅವರ ಸ್ನೇಹಿ ಪಕ್ಷಗಳು ಕೀಳುಮಟ್ಟದ ರಾಜಕೀಯ ಮಾಡುತ್ತಿವೆ. ತಥಾಕಥಿತ ಇಂಡಿ ಘಟಬಂಧನ್​ ಮಾಡೋದೇ ಹೀಗೆ ಎಂದು ವ್ಯಂಗ್ಯವಾಡಿದರು.

ಹಿಂದಿಯನ್ನೂ ಹೇರಿಲ್ಲ

ರೂಪಾಯಿ ಚಿಹ್ನೆಯನ್ನು ಡಿಸೈನ್​ ಮಾಡಿದ್ದೂ ಸಹ ತಮಿಳುನಾಡಿನವನು. ನೀವು ಮಾಡಿದ ರೂಪಾಯಿ ಸಿಂಬಲ್​ಗೆ ಬಿಜೆಪಿಯವರೂ ಅಂದು ಅಭ್ಯಂತರ ಮಾಡಿಲ್ಲ. ನಿಮ್ಮ ಕ್ಷುಲ್ಲಕ ರಾಜಕಾರಣಕ್ಕೆ, ಡಿಎಂಕೆ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಮನಬಂದಂತೆ ಹೇಳಿಕೆ ನೀಡಬೇಡಿ. ತ್ರಿಭಾಷಾ ಸೂತ್ರ ಮಾಡಿದ್ದು ಯಾರು? ಅದು ನೆಹರು ಅವರ ಕಾಲದಿಂದಲೂ ಇದೆ. ಹೊಸ ಎನ್​ಇಪಿಯಲ್ಲಿ ತ್ರಿಭಾಷಾ ಸೂತ್ರ ಮಾಡಲು ಹೇಳಿದ್ದೇವೆಯೇ ಹೊರತು ಅಲ್ಲಿ ಹಿಂದಿ ಭಾಷೆ ಇರಬೇಕು ಎಂದು ನಾವು ಹೇಳಿದ್ದೇವಾ? ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಬೇಡಿ ಎಂದರು.

ಬಿಜೆಪಿಯಲ್ಲಿಲ್ಲ ಭಿನ್ನಮತ

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನ ಆಗದೇ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲ ವಿಚಾರ, ವಿಷಯವನ್ನು ಹೈಕಮಾಂಡ್​ ಗಮನಿಸಿದೆ. ಅದನ್ನು ಸರಿ ಮಾಡುವ ಪ್ರಯತ್ನ ಒಂದು ವಾರದಿಂದ ಮುಂದುವರಿದಿದೆ. ಅದನ್ನು ನೀವೆಲ್ಲರೂ ಗಮನಿಸಿರುತ್ತೀರಿ ಎಂದು ಮಂದಹಾಸ ಬೀರಿದರು.

ಪಾಕಿಸ್ತಾನದಲ್ಲಿ ಕುಸಿದ ಆಡಳಿತ

ಪಾಕಿಸ್ತಾನದಲ್ಲಿ ರೈಲು ಹೈಜಾಕ್​ ಘಟನೆಯಲ್ಲಿ ಭಾರತದ ಪ್ರಚೋದನೆಯ ಆರೋಪಕ್ಕೆ ಪ್ರತಿಕ್ರಿಯಿಸಿ ಸಚಿವ ಜೊಶೀ, ವಿದೇಶಾಂಗ ಸಚಿವಾಲಯ ಈಗಾಗಲೇ ಸುದೀರ್ಘ ಉತ್ತರ ಕೊಟ್ಟಿದೆ. ಪಾಕಿಸ್ತಾನದಲ್ಲಿ ಆಡಳಿತ ವ್ಯವಸ್ಥೆಯೇ ಕುಸಿದು ಹೋಗಿದೆ. ಅಲ್ಲಿ ವಿದೇಶಿಯರು, ರಾಜತಾಂತ್ರಿಕರು ಹೋಗಲು ಭಯಪಡುವ ಪರಿಸ್ಥಿತಿ ಇದೆ. ಆ ಘಟನೆಯಲ್ಲಿ ಭಾರತವನ್ನು ದೂಷಿಸುವುದು ಅತ್ಯಂತ ಬಾಲಿಷತನ. ಜಗತ್ತಿನಲ್ಲಿ ಎಲ್ಲಿಯೂ ಅಶಾಂತಿ ಇರಬಾರದು ಅನ್ನುವುದು ಭಾರತದ ಧೋರಣೆಯಾಗಿದೆ ಎಂದರು.

ಕಾಂಗ್ರೆಸ್​ನ ಅಸಭ್ಯತೆ ಸಾಬೀತು

ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್​ಈಶ್ವರ್​, ಪಿ.ಸಿ. ಮೋಹನ್​ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಆ ತರದ ವ್ಯಕ್ತಿ ಮತ್ತು ಆಡಿರುವ ಅಪಶಬ್ದಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಏನಾದರೂ ಕಾರ್ಯಕ್ರಮ ಮಾಡಿದರೆ ಅದು ಮೋದಿ ಕೊಟ್ಟಿದ್ದು, ಸಿದ್ದರಾಮಯ್ಯ ಕೊಟ್ಟಿದ್ದು ಎಂದು ಹೇಳಲಾಗದು. ಅದು ಕೇಂದ್ರ ಸರ್ಕಾರದ ಅಥವಾ ಕರ್ನಾಟಕ ಸರ್ಕಾರದ ಕಾರ್ಯಕ್ರಮ ಎಂದೇ ಹೇಳಬೇಕು. 'ಸರ್ಕಾರದ ದುಡ್ಡಿನಲ್ಲಿ ಮಾಡುವ ಕಾರ್ಯಕ್ರಮ. ನಿಮ್ಮ ಅಪ್ಪಂದಲ್ಲ' ಎಂದು ಹೇಳುವುದು, ಅಸಭ್ಯ ಭಾಷೆಯ ಬಳಕೆ ರಾಜಕಾರಣಕ್ಕೆ ಶೋಭೆ ತರುವಂತದ್ದಲ್ಲ. ಕಾಂಗ್ರೆಸ್​ ಪಾರ್ಟಿಗೂ ಸಭ್ಯತೆಗೂ ಏನು ಸಂಬಂಧ ಇಲ್ಲ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದರು.