ಜಿಲ್ಲೆ

ಸೋಲಾರ್‌ ಪಾರ್ಕ್ ಕಾರ್ಯಾರಂಭ: ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಟ್ವೀಟ್

ತುಮಕೂರು: ಪಾವಗಡದಲ್ಲಿರುವ ವಿಶ್ವದ ಅತೀ ದೊಡ್ಡ ಸೌರ ಪಾರ್ಕ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ್ದು, 2050 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ ಸಾಕಾರಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ.

16500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸೌರಪಾರ್ಕ್ ಮೊದಲನೇ ಹಂತವನ್ನು 2018ರ ಮಾ.1ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಮೊದಲ ಹಂತದಲ್ಲಿ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. 2020ರ ಜನವರಿಗೆ 2050 ಮೆಗಾವಾಟ್ ಉತ್ಪಾದಿಸುವ ಗುರಿ ಸಾಕಾರಗೊಂಡಿದ್ದು, ಆ ಮೂಲಕ ಸ್ವಾವಲಂಬನೆ ಸಾಧಿಸಿದಂತಾಗಿದೆ.

ಪಿಯೂಷ್ ಟ್ವೀಟ್: ಭಾರತವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದೆ. ರೈತರು ಗುತ್ತಿಗೆ ಆಧಾರದಲ್ಲಿ ನೀಡಿರುವ ಭೂಮಿಯಲ್ಲಿ ಸೌರ ಪಾರ್ಕ್ ನಿರ್ಮಿಸಿದ್ದು, ಹಳ್ಳಿಗಳ ಅಭಿವೃದ್ಧಿ ಬಾಗಿಲು ತೆರೆದಂತಾಗಿದೆ. ಅವರ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ. ಈಗ ಸದ್ಯ 1700 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ಮುನ್ನೂರು ಮೆಗಾವಾಟ್ ಟೆಸ್ಟಿಂಗ್‌ನಲ್ಲಿದೆ.

13 ಸಾವಿರ ಎಕರೆ ಭೂ ಸ್ವಾಧೀನ: ವಿಶ್ವದ ಅತೀ ದೊಡ್ಡ ಸೌರಪಾರ್ಕ್‌ಗೆ 13000 ಎಕರೆ ಭೂ ಸ್ವಾಧೀನಪಡಿಸಿಕೊಂಡಿದ್ದು, 2300 ರೈತರು ಭೂಮಿ ನೀಡಿದ್ದಾರೆ. ಪ್ರತಿ ಎಕರೆಗೆ ವಾರ್ಷಿಕ 21 ಸಾವಿರ ರೂ., ನೀಡುವ ಮೂಲಕ ಗುತ್ತಿಗೆ ಆಧಾರದಲ್ಲಿ ರೈತರಿಂದ ಭೂಮಿ ಪಡೆಯಲಾಗಿದೆ. 16500 ಕೋಟಿ ರೂ., ವೆಚ್ಚ ಮಾಡಲಾಗಿದ್ದು, 2000 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿಹೊಂದಲಾಗಿತ್ತು.