ಜಿಲ್ಲೆ

ಕುನ್ಹಾ ಬಗ್ಗೆ ಕೇಂದ್ರ ಸಚಿವ ಜೋಶಿ ಲಘು ಮಾತು, ರಾಜೀನಾಮೆಗೆ ಕಾನೂನು ಸಚಿವ ಎಚ್.ಕೆ. ಪಾಟೀಲ ಪಟ್ಟು

ಗದಗ: ಸಂವಿಧಾನ ಎತ್ತಿ ಹಿಡಿಯುವ ಹಾಗೂ ಗೌರವದಿಂದ ಇರಬೇಕಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಜಸ್ಟಿಸ್ ಮೈಕೆಲ್ ಕುನ್ನಾ ಅವರನ್ನು ಏಜೆಂಟ್ ಎಂದು ಕರೆದಿರುವುದು ಮತ್ತು ಆಯೋಗದ ಬಗ್ಗೆ ಲಘುವಾಗಿ ಟೀಕೆ ಮಾಡಿರುವುದು ದುರ್ದೈವದ ಸಂಗತಿ. ಪ್ರಲ್ಹಾದ ಜೋಶಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಉನ್ನತ ಹಾಗೂ ಎತ್ತರದ ಹುದ್ದೆಗಳಲ್ಲಿರುವ ಜವಾಬ್ದಾರಿ ವ್ಯಕ್ತಿಗಳು ಮನಬಂದಂತೆ ಮಾತನಾಡುತ್ತಿದ್ದಾರೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯಮೂರ್ತಿಗಳು ಹಾಗೂ ತನಿಖಾ ಸಂಸ್ಥೆಯ ನೇತೃತ್ವ ಹೊಂದಿರುವ ಆಯೋಗಗಳಿಗೂ ಮನಬಂದಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

>ಪ್ರಲ್ಹಾದ ಜೋಶಿ ನಮ್ಮ ರಾಜ್ಯದ ತನಿಖಾ ಆಯೋಗಕ್ಕೆ ಅಗೌರವ ಹಾಗೂ ಅಸಂಬದ್ಧ ರೀತಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ರಾಷ್ಟ್ರಪತಿಗಳು ಅವರನ್ನು ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು. ಅಲ್ಲದೆ, ರಾಜಕೀಯ ಭಯ, ಸತ್ಯಾನ್ವೇಷಣೆ ನಡೆಯಬಾರದು, ಭ್ರಷ್ಟಾಚಾರಿಗಳಿಗೆ ಶಿಕ್ಷೆ ಆಗಬಾರದು ಎಂಬ ಹಾದಿಯಲ್ಲಿ ಹೊರಟಿರುವ ಜೋಶಿ ಅವರ ಮೇಲೆ ರಾಷ್ಟ್ರಪತಿಗಳು ಕಾನೂನು ಕ್ರಮ ಕೈಗೊಳ್ಳುವ ಮೊದಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಜಸ್ಟಿಸ್ ಮೈಕೆಲ್ ಕುನ್ನಾ ಅವರು ಕಡತಗಳನ್ನು ಪರಿಶೀಲಿಸಿ 7223 ಕೋಟಿ ರೂ. ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ. ನೂರಾರು ಕೋಟಿ ರೂ. ವೆಚ್ಚಗಳ ಕುರಿತು ಲೆಕ್ಕಪತ್ರಗಳಿಲ್ಲ, ಕಾಗದಗಳೂ ಇಲ್ಲ. ಯಡಿಯೂರಪ್ಪ ಸಿಎಂ ಹಾಗೂ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದರು.

ಜಸ್ಟಿಸ್ ಮೈಕೆಲ್ ಕುನ್ನಾ ಅವರ ಆಯೋಗ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಯಡಿಯೂರಪ್ಪ ಅವರು ಸಿಎಂ ಹಾಗೂ ಶ್ರೀರಾಮುಲು ರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ 3 ಲಕ್ಷ ಪಿಪಿಇ ಕಿಟ್​ಗಳನ್ನು 2,117 ರೂ. ನಂತೆ ಖರೀದಿಸಿ ಮಾರಾಟ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾನ್ಯತೆ ಇಲ್ಲದ 14 ಖಾಸಗಿ ಲ್ಯಾಬೋರೇಟರಿಗಳಿಗೆ ಕೋಟ್ಯಂತರ ಹಣ ಸಂದಾಯ ಮಾಡಿದ್ದಾರೆ. ಇನ್ನೂ 8 ಲ್ಯಾಬೊರೇಟರಿಗಳಿಗೆ 4 ಕೋಟಿ ರೂ. ಗೂ ಅಧಿಕ ಹಣ ಸಂದಾಯ ಮಾಡಿರುವುದನ್ನು ಆಯೋಗ ಪತ್ತೆ ಮಾಡಿದೆ. ಕರೊನಾದಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರ ಮಾಡಿರುವುದನ್ನು ಆಯೋಗ ಹೇಳಿದೆ. ಅದನ್ನು ಸಹಿಸಿಕೊಳ್ಳಲಾಗದೇ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ ಎಂದರು. ಮುಖಂಡರಾದ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಬಸವರಾಜ ಕಡೇಮನಿ ಇದ್ದರು.

 ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಗದಗ ಜಿಲ್ಲೆಯಲ್ಲಿ ಕೋಟುಮಚಗಿ ಗ್ರಾಮದಲ್ಲಿ 562 ಸರ್ವೆ ನಂಬರ್​ನ ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹೆಸರು ಇದ್ದಾಗಲೂ ಇದು ವಕ್ಪ್ ಹೆಸರಿನಲ್ಲಿದೆ ಎಂದು ಅಪಪ್ರಚಾರ ಮಾಡಿದ್ದಾರೆ. ಇದು ಬದಲಾವಣೆ ಆಗಿಲ್ಲ. ಆ ರೀತಿ ಬದಲಾವಣೆ ಮಾಡಕೂಡದು ಎಂದು ಸರ್ಕಾರ ಆದೇಶ ನೀಡಿದೆ. ಈ ಕುರಿತು ತಪ್ಪು ಮಾಹಿತಿ ಹರಡುವವರ ಮಾತಿಗೆ ಯಾರೂ ಕಿವಿಕೊಡಬಾರದು ಎಂದು ಸಚಿವ ಎಚ್. ಕೆ. ಪಾಟೀಲ ಮನವಿ ಮಾಡಿದರು.