ಜಿಲ್ಲೆ

ಪ್ರಯಾಗ್ ರಾಜ್ ವಿಮಾನ ದರ ಪರಿಷ್ಕರಣೆಗೆ ಕೇಂದ್ರ ಸಚಿವ ಜೋಶಿ ಮನವಿ

ಹುಬ್ಬಳ್ಳಿ : ಪ್ರಯಾಗ್​ರಾಜ್​ಗೆ ಹೋಗುವ ವಿಮಾನಗಳ ದರವನ್ನು ಅತಿಯಾದ ಏರಿಕೆ ಮಾಡಿರುವುದರಿಂದ ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರು ಅನಾನುಕೂಲತೆ ಎದುರಿಸುತ್ತಿದ್ದಾರೆ. ತಕ್ಷಣ ವಿಮಾನಯಾನ ಸಂಸ್ಥೆಗಳು ದರ ಪರಿಷ್ಕರಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವನ್ನು ಆಗ್ರಹಿಸಿದ್ದಾರೆ.

ವಿಮಾನಯಾನ ಕಂಪನಿಗಳು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಸಂದರ್ಭದ ಲಾಭ ಪಡೆದು ವಿಮಾನ ದರದಲ್ಲಿ ವಿಪರೀತ ಹೆಚ್ಚಳ ಮಾಡುತ್ತಿವೆ. ಎಕಾನಮಿ ದರ್ಜೆಯ ದರ ಶೇ. 200 ರಿಂದ ಶೇ. 700ವರೆಗೂ ಹೆಚ್ಚಿಸಿವೆ. ಇದರಿಂದ ಮಹಾಕುಂಭಕ್ಕೆ ಭೇಟಿ ನೀಡಿ ಅಲ್ಲಿಂದ ಹಿಂದಿರುಗುವ ಶ್ರದ್ಧಾಳುಗಳಿಗೆ ಗಂಭೀರ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ವಿಮಾನಯಾನ ಕಂಪನಿಗಳು ತಮ್ಮ ದರಗಳನ್ನು ಮಿತಿಗೊಳಿಸಬೇಕು ಮತ್ತು ಸೇವೆಗಳನ್ನು ವಿಸ್ತರಿಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಗಮನ ನೀಡಬೇಕು ಎಂದು ಪ್ರಲ್ಹಾದ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಿಳಿಸಿದ್ದಾರೆ.