ಜಿಲ್ಲೆ

ಸೈಕ್ಲಿಂಗ್ ಟ್ರ್ಯಾಕ್ ಚಾಲನೆಗೆ ಕೇಂದ್ರ ಸಚಿವರಿಗೆ ಆಹ್ವಾನ

ಕಟಕೋಳ: ಸಮೀಪದ ಚಂದರಗಿ ಗ್ರಾಮದಲ್ಲಿ ಸಹಕಾರ ಕ್ಷೇತ್ರದ ಕ್ರೀಡಾ ವಸತಿ ಶಾಲೆಯಲ್ಲಿ ನಿರ್ಮಿಸಲಾದ 1.50 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಸೈಕ್ಲಿಂಗ್ ಟ್ರ್ಯಾಕ್ (ವೆಲೋಡ್ರೋಮ್) ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಜಗದೀಶ ಶೆಟ್ಟರ್ ಅವರು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸೂಖ್ ಮಾಂಡವಿಯಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಈಚೆಗೆ ಆಹ್ವಾನಿಸಿದರು.

ಚಂದರಗಿ ಕ್ರೀಡಾ ವಸತಿಶಾಲೆ ಸಹಕಾರ ಕ್ಷೇತ್ರದಲ್ಲಿ ನಡೆಯುವ ದೇಶದ ಏಕೈಕ ಸಂಸ್ಥೆಯಾಗಿದೆ. ಸಂಸ್ಥೆಯಿಂದ ನಿರ್ಮಾಣವಾಗಿರುವ ಸೈಕ್ಲಿಂಗ್ ಟ್ರ್ಯಾಕ್ ಬೆಂಗಳೂರು ನಂತರ ಉತ್ತರ ಕರ್ನಾಟಕದ ಏಕೈಕ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಸೈಕ್ಲಿಂಗ್ ಟ್ರ್ಯಾಕ್ ತರಬೇತಿಗೆ ಬೇಕಾದ ಮೂಲ ಸೌಕರ್ಯ, ಪರಿಣತರ ತಂಡ ಮತ್ತು ಸುರಕ್ಷತಾ ಕ್ರಮ ಒಳಗೊಂಡಿದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸೈಕ್ಲಿಂಗ್ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಈ ಸಂಸ್ಥೆ ಸಹಕಾರಿಯಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು. ಸಂಸ್ಥೆಯ ಸಂಸ್ಥಾಪಕ ಸಿದ್ದರಾಮ ಕಲೂತಿ ಮತ್ತು ಸಂಸ್ಥೆಯ ನಿರ್ದೇಶಕ ಪಥ್ವಿರಾಜ ಜಾಧವ ಉಪಸ್ಥಿತರಿದ್ದರು.