ಗಾಂಧಿ ನಗರ ಎಸ್‌ಎಸ್ ಏಜೆನ್ಸಿಯಲ್ಲಿ ಸೋಲಾರ್ ಅಳವಡಿಕೆಗೆ ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಎಸ್.ಎ.ಬಿಜು, ಎ.ರಾಜಮಣಿ, ಕಾರ್ತೀಕ್ ಗಿನಕಲ್, ಎಸ್.ಎಂ.ಶೆಣೈ, ದರ್ಶನ್ ಹೆಗಡೆ ಮುಂತಾದವರಿದ್ದರು. 
ಜಿಲ್ಲೆ

ಸೌರಶಕ್ತಿಗೆ ಯೂನಿಯನ್ ಬ್ಯಾಂಕ್ ಸಹಕಾರ

Shivamogga - Desk - Praveena Kumar S

ಶಿವಮೊಗ್ಗ: ನೈಸರ್ಗಿಕವಾಗಿ ದೊರೆಯುವ ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು, ಪೆಟ್ರೋಲ್, ಡೀಸೆಲ್ ಮುಂತಾದ ನವೀಕರಿಸಲು ಸಾಧ್ಯವಾಗದ ಸಂಪನ್ಮೂಲಗಳ ಬಳಕೆ ಕಡಿಮೆ ಮಾಡಿ ಸೌರಶಕ್ತಿ ಬಳಕೆ ಹೆಚ್ಚಿಸಬೇಕಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಸಿಜಿಎಂ ಎಸ್.ಎ.ಬಿಜು ಹೇಳಿದರು.
ಬುಧವಾರ ಟಾಟಾ ಪವರ್ ಸೋಲಾರ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಗಾಂಧಿ ನಗರ ಎಸ್.ಎ.ಏಜೆನ್ಸಿಯಲ್ಲಿ ಏರ್ಪಡಿಸಿದ್ದ ಸೋಲಾರ್ ಅಳವಡಿಕೆಗೆ ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ಎಂಎಸ್‌ಎಂಇಗಳಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸೌರಶಕ್ತಿ ಉತ್ಪಾದನೆಗೆ ನಮ್ಮ ಬ್ಯಾಂಕ್ ಅಗತ್ಯ ಸಹಕಾರ ನೀಡಲಿದೆ ಎಂದರು.
ಯಂತ್ರದ ಮೇಲೆ ಅವಲಂಬನೆ ಹೆಚ್ಚಿರುವುದರಿಂದ ವಿದ್ಯುತ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ಸಮಸ್ಯೆ ತಲೆದೋರಿದೆ. ಹೀಗಾಗಿ ಸೌರಶಕ್ತಿ ಉತ್ಪಾದನೆ ಹಾಗೂ ಬಳಕೆಗೆ ನಮ್ಮ ಬ್ಯಾಂಕ್ ಆದ್ಯತೆ ನೀಡಿದೆ. ಸಾರ್ವಜನಿಕರು ಹಾಗೂ ಉದ್ದಿಮೆದಾರರು ಇದರ ಪ್ರಯೋಜನ ಪಡೆಯಬೇಕೆಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಡಿಜಿಎಂ ಎ.ರಾಜಮಣಿ ಮಾತನಾಡಿ, ಸೌರಶಕ್ತಿ ಬಳಕೆ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ. ನಾರಿಶಕ್ತಿ ಯೋಜನೆ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಮುದ್ರಾ ಯೋಜನೆಯೂ ಅರ್ಥಿಕ ಸಬಲೀಕರಣಕ್ಕೆ ಅನುಕೂಲಕರವಾಗಿದೆ ಎಂದರು.
ಟಾಟಾ ಪವರ್ ಸೋಲಾರ್‌ನ ಪ್ರಾದೇಶಿಕ ವ್ಯವಸ್ಥಾಪಕ ಕಾರ್ತೀಕ್ ಗಿನಕಲ್, ಮಾರುಕಟ್ಟೆ ಪ್ರತಿನಿಧಿ ದರ್ಶನ್ ಹೆಗಡೆ, ಟಾಟಾ ಸೋಲಾರ್‌ನ ಚಾನಲ್ ಪಾರ್ಟ್‌ನರ್ ಎಸ್.ಎಸ್.ಏಜೆನ್ಸಿಯ ಎಸ್.ಎಂ.ಶೆಣೈ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.