ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಪುನರಾರಂಭಗೊಂಡ ಬಿಸಿಎ ಪದವಿ ತರಗತಿಗಳಿಗೆ ಕಿಮ್ಮನೆ ರತ್ನಾಕರ್ ಚಾಲನೆ ನೀಡಿದರು. ಪಿ.ವಿ.ಮಹಾಬಲೇಶ್, ಎಂ.ಎನ್.ರಮೇಶ್, ಡಾನ್ ರಾಮಣ್ಣ, ಜೆ.ಟಿ.ಸುಂದರೇಶ್ ಇತರರಿದ್ದರು.  
ಜಿಲ್ಲೆ

ವಿದ್ಯಾವಂತರಿಂದಲೇ ಅವ್ಯಾಹತ ಅತ್ಯಾಚಾರ, ಅನಾಚಾರ

Shivamogga - Desk - Vinayakumar D B

ತೀರ್ಥಹಳ್ಳಿ: ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ ಎಂಬ ನಂಬಿಕೆ ದೂರವಾಗಿದೆ. ಪ್ರಸ್ತುತ ಶೇ.99 ವಿದ್ಯಾವಂತರಿಂದಲೇ ಸಮಾಜದಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರಗಳು ಅವ್ಯಾಹತವಾಗಿ ನಡೆಯುವುದನ್ನು ಕಾಣುವಂತಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಪುನರಾರಂಭಗೊಂಡ ಬಿಸಿಎ ಪದವಿ ತರಗತಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಇಂದಿನ ಶಿಕ್ಷಣಾರ್ಥಿಗಳಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಕಂಪ್ಯೂಟರ್ ಜ್ಞಾನ ಅತಿ ಅಗತ್ಯವಾಗಿದೆ. ವೈಜ್ಞಾನಿಕವಾಗಿ ಪ್ರಪಂಚ ಮುಂದುವರಿದಿದ್ದು, ಚಂದ್ರ ಲೋಕ ಮಾತ್ರವಲ್ಲದೆ ಸೂರ್ಯನೆಡೆಗೂ ಸಂಪರ್ಕ ಕಲ್ಪಿಸುವಷ್ಟರ ಮಟ್ಟಿಗೆ ವಿಜ್ಞಾನ ಮುಂದುವರಿದಿದೆ. ಆದರೆ ಮಾನವೀಯ ಮೌಲ್ಯಗಳನ್ನು ಉಳಿಸಿ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ ವಿಜ್ಞಾನವೊಂದೇ ಪರ್ಯಾಯ ಅಲ್ಲ. ಸಾಯುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸುವ ಕಾರ್ಯವೇ ಮುಖ್ಯ ಎಂದರು.
ಸಮಾಜಕ್ಕೆ ಬುದ್ಧಿ ಹೇಳುವವರೇ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗಳಲ್ಲಿ ಮತ ನೀಡಲು ಹಣಕ್ಕಾಗಿ ಕೈ ಒಡ್ಡುವುದನ್ನು ನೋಡುತ್ತಿದ್ದೇವೆ. ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಒಂದು ರೂ. ನಗದಾಗಲಿ, ಒಂದಿಂಚು ಭೂಮಿಯಾಗಲಿ ಇಲ್ಲ. ಆದರೆ ಜಗತ್ತಿನ 160 ದೇಶಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳಿರುವುದು ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಮಾತನಾಡಿದ ಕಿಮ್ಮನೆ ರತ್ನಾಕರ್, ರಾಷ್ಟ್ರೀಯ ಭಾವನೆ ಎನ್ನೋದು ಹೆತ್ತ ತಂದೆತಾಯಿಯನ್ನು ನೋಡಿಕೊಳ್ಳುವಷ್ಟೇ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ರಾಷ್ಟ್ರೀಯತೆಗೆ ಪ್ರತ್ಯೇಕ ಶಿಕ್ಷಣದ ಅಗತ್ಯವಿಲ್ಲ. ಮುಗ್ಧ ಮಕ್ಕಳ ಮೇಲೆ ಜಾತಿಧರ್ಮದ ಅಮಲನ್ನು ಬೀರದೆ ಅವರಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಹೃದಯವನ್ನು ಬೆಸೆಯುವ ಭಾವನೆಯನ್ನು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಕಾಲೇಜಿನಿಂದ ಗೌರವ ಸ್ವೀಕರಿಸಿದ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಖ್ಯಸ್ಥ ಸಿರಿಬೈಲು ಧರ್ಮೇಶ್, ಎಲ್‌ಕೆಜಿಗೂ ಲಕ್ಷ ರೂ. ಶುಲ್ಕ ಇರುವ ಈ ದಿನಗಳಲ್ಲಿ ಅತಿ ಕನಿಷ್ಠ ಶುಲ್ಕದೊಂದಿಗೆ, ಆಧುನಿಕ ಸೌಲಭ್ಯದೊಂದಿಗೆ ಬಿಸಿಎ ಪದವಿ ಶಿಕ್ಷಣ ನೀಡುತ್ತಿರುವ ತುಂಗಾ ಕಾಲೇಜಿನ ಕಾರ್ಯ ಶ್ಲಾಘನೀಯ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ವಿ.ಮಹಾಬಲೇಶ್, ಉಪಾಧ್ಯಕ್ಷ ಎಂ.ಎನ್.ರಮೇಶ್, ಕಾರ್ಯದರ್ಶಿ ಡಾನ್ ರಾಮಣ್ಣ, ಖಜಾಂಚಿ ಜೆ.ಟಿ.ಸುಂದರೇಶ್, ಮಾಜಿ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಪ್ರಾಚಾರ್ಯ ಡಾ. ಕೆ.ಅಂಜನಪ್ಪ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೆಂಪೆ ದೇವರಾಜ್, ಕಾರ್ಯದರ್ಶಿ ಕೆ.ಟಿ.ರಮೇಶ್ ಇದ್ದರು.