ಮಳವಳ್ಳಿ: ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಾಯಿಯೊಬ್ಬರಿಂದ ಏಳು ತಿಂಗಳ ಮಗು ಪಡೆದುಕೊಂಡಿದ್ದ ಅಪರಿಚಿತೆ ಪಟ್ಟಣದ ನಿಲ್ದಾಣದಲ್ಲಿ ಬಸ್ ಇಳಿದು ಮಗುವಿನೊಂದಿಗೆ ಸೋಮವಾರ ಸಂಜೆ ಪರಾರಿಯಾಗಿದ್ದಾಳೆ.
ತಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಶಿವಕುಮಾರ್ ಅವರ ಪತ್ನಿ ಸವಿತಾ ಮಗು ಕಳೆದುಕೊಂಡ ತಾಯಿ. ಈಕೆ ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ತನ್ನ ಏಳು ತಿಂಗಳ ಗಂಡು ಮಗುವಿನೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಪತಿ ಮನೆಗೆ ಬರುತ್ತಿದ್ದರು. ಬಸ್‌ನಲ್ಲಿ ಪ್ರಯಾಣಿಕರು ಹೆಚ್ಚಿದ್ದ ಕಾರಣ ಸೀಟ್‌ನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬಳು ಮಗುವನ್ನು ಪಡೆದುಕೊಂಡಿದ್ದಾರೆ.
ಬೇರೊಂದು ಬಸ್‌ಗೆ ಹೋಗಬೇಕೆಂದು ಪಟ್ಟಣದ ನಿಲ್ದಾಣದಲ್ಲಿ ಬಸ್‌ನಿಂದ ಇಳಿಯಲು ಸವಿತಾ ಮುಂದಾಗಿದ್ದಾರೆ. ಈ ವೇಳೆ ತಾನು ಕೂಡ ಕೆಳಗೆ ಬರಲಿದ್ದು, ನೀವು ಇಳಿಯಿರಿ ಎಂದು ಮಗು ಪಡೆದಿದ್ದ ಮಹಿಳೆ ತಿಳಿಸಿದ್ದಾಳೆ. ಮಗುವಿನ ತಾಯಿ ಸವಿತಾ ಕೈಯಲ್ಲಿ ಲಗ್ಗೇಜ್ ಇದ್ದುದ್ದರಿಂದ ಬಸ್‌ನಿಂದ ಕೆಳೆಗಿಳಿಯುವಷ್ಟರಲ್ಲಿ ಮಗು ಪಡೆದಿದ್ದ ಅಪರಿಚಿತ ಮಹಿಳೆ ಕಣ್ಮರೆಯಾಗಿದ್ದಾಳೆ ಎನ್ನಲಾಗಿದೆ. ಬಳಿಕ ಎಲ್ಲೆಡೆ ಹುಡುಕಾಡಿದರೂ ತನ್ನ ಮಗು ಕಾಣದಿರುವುದನ್ನು ಅರಿತ ತಾಯಿ ಅಳುತ್ತಾ ಕೂಗಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸವಿತಾ ಅವರನ್ನು ಸಮಾಧಾನಪಡಿಸಿ ಠಾಣೆಗೆ ಕರೆದೊಯ್ದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.