ಜಿಲ್ಲೆ

ಮಾವು ಮಾರುಕಟ್ಟೆಯ ಅವ್ಯವಸ್ಥೆಯಿಂದ ಅನೈರ್ಮಲ್ಯ

ಶ್ರೀನಿವಾಸಪುರ: ಮಾವಿನ ಋತು ಆರಂಭವಾಗಿದ್ದು, ಮಾವಿನ ನಗರಿ ಎಂದೇ ಖ್ಯಾತಿ ಪಡೆದ ಶ್ರೀನಿವಾಸಪುರದಲ್ಲಿ ವ್ಯಾಪಾರ ಚಟುವಟಿಕೆ ಗರಿಗೆದರುತ್ತಿರುವ ಹೊತ್ತಿನಲ್ಲಿ, ಸುತ್ತ ಮುತ್ತಲಿನ ನಿವಾಸಿಗಳು ಸ್ವಚ್ಛತೆ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಹೊರವಲಯದ ಎಪಿಎಂಸಿ ಮಾವು ಮಾರುಕಟ್ಟೆ ಸಮೀಪದ ಇಂದಿರಾನಗರದ ನಿವಾಸಿಗಳು, ಮಾರುಕಟ್ಟೆಯಲ್ಲಿ ನಿರಂತರವಾಗಿ ಮಾವಿನ ವ್ಯಾಪಾರದಿಂದ ಪರಿಸರದಲ್ಲಿ ನೋಣ ಹಾಗೂ ಸೊಳ್ಳೆಗಳು ಹೆಚ್ಚುವ ಭೀತಿಯಿಂದ ಪುರಸಭೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೂಳ್ಳುವಂತೆ ಒತ್ತಾಯಿಸಿದ್ದಾರೆ.

ಪಟ್ಟಣದ ಕೆಲವು ನಿವಾಸಿಗಳು ತಮ್ಮ ಮನೆಗಳ ಪಕ್ಕದಲ್ಲಿಯೇ ಮಾವಿನ ಕಾಯಿಯಿಂದ ಆಮ್​ಚೂರ್​ ಮತ್ತು ಆಮ್​ ಪಾಪಡ್​ ಮಾಡಿ ಸಣ್ಣ ಮಟ್ಟದಲ್ಲಿ ವ್ಯಾಪಾರ ಮಾಡಲು ಆರಂಭಿಸಿದ್ದಾರೆ. ಆಮ್​ಚೂರ್​ಅನ್ನು ಬೆಂಗಳೂರಿನ ಚಿಂತಾಮಣಿ, ಕೋಲಾರ, ಮದನಪಲ್ಲಿ (ಆಂಧ್ರ ಪ್ರದೇಶ) ಸೇರಿ ಹಲವು ಕಡೆಗಳಿಂದ ಬರುವ ಸಣ್ಣ ವ್ಯಾಪಾರಿಗಳು ಮನೆ ಬಳಿಯೆ ಬಂದು ಕೆ.ಜಿ ಗೆ 60 ರೂ. ದರದಲ್ಲಿ ಖರೀದಿಸುತ್ತಿದ್ದು, ಈ ಚಟುವಟಿಕೆ ಸ್ಥಳಿಯರಿಗೆ ಪ್ರಯೋಜನಕಾರಿಯಾಗಿದೆ. ಕೆಲವು ಕುಟುಂಬಗಳು ದಿನಕ್ಕೆ 500 ರಿಂ 1000 ರೂ.ವರೆಗೆ ಗಳಿಸುತ್ತಿದ್ದಾರೆ. ಇದು ಶ್ರೀನಿವಾಸಪುರದ ಸ್ಥಳಿಯ ಆರ್ಥಿಕತೆ ಪ್ರೋತ್ಸಾಹಿಸುತ್ತಿರುವುದು ಕಂಡುಬರುತ್ತಿದೆ.

ಮಾವು ಬಾಕ್ಸ್​ ಪ್ಯಾಕಿಂಗ್​, ಲೋಡಿಂಗ್​, ಮಾರುಕಟ್ಟೆ ನಿರ್ವಹಣೆ ಮುಂತಾದ ಕೆಲಸಗಳಿಗೆ ಉದ್ಯೋಗಕ್ಕಾಗಿ ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಸೇರುತ್ತಿದ್ದಾರೆ.

ಆಂಧ್ರ ಪ್ರದೇಶ, ತಮಿಳುನಾಡು, ಜಾರ್ಖಂಡ್​, ಬಿಹಾರ್​, ಉತ್ತರ ಪ್ರದೇಶದಿಂದ ಬರುವ ಕಾರ್ಮಿಕರು ಇದರಿಂದ ಲಾಭ ಪಡೆಯುತ್ತಿದ್ದಾರೆ. ಮೂವರು ತಿಂಗಳಲ್ಲಿ ಲಕ್ಷಾಂತರ ರೂ. ವಹಿವಾಟು ನಡೆದಿದೆ. ರೈತರಿಗೆ ವ್ಯಾಪಾರಸ್ಥರಿಗೆ ಇದು ಚೈತನ್ಯ ತುಂಬುತ್ತಿದೆ. ಆದರೆ ಈ ಎಲ್ಲ ಆರ್ಥಿಕ ಚಟುವಟಕೆಗಳ ನಡುವೆ ಸ್ವಚ್ಛತೆ ಮತ್ತು ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಮಾರುಕಟ್ಟೆ ಸಮೀಪದ ನಿವಾಸಿಗಳು ಕಳವಳಗೊಂಡಿದ್ದಾರೆ.

ಇಂದಿರಾನಗರ ನಿವಾಸಿಗಳ ಪ್ರಕಾರ, ಸುತ್ತಮುತ್ತಲಿನ ಸ್ವಚ್ಛತೆ ಸಂಪೂರ್ಣ ಹಾಳಾಗಿದ್ದು ಚರಂಡಿಗಳಲ್ಲಿ ಕಸ ತುಂಬಿ ಹರಿಯುವ ಪರಿಸ್ಥಿತಿಯಲ್ಲಿದ್ದು ತುರ್ತು ಸ್ವಚ್ಛತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕರಿಂದ ಪುರಸಭೆಗೆ ಆಗ್ರಹ

ಇಂದಿರಾನಗರ ಹಾಗೂ ಸುತ್ತಮುತ್ತಲ ನಿವಾಸಿಗಳು ಪುರಸಭೆಯ ಆರೋಗ್ಯ ಅಧಿಕಾರಿಗಳಿಗೆ, ಎಪಿಎಂಸಿ ಮಾರುಕಟ್ಟೆ ಹಾಗೂ ಅದರ ಪಕ್ಕದ ಮಾವು ಮಂಡಿಗೆ ತಕ್ಷಣ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ ಸೂಕ್ತ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದಾರೆ. ಕಾರ್ಮಿಕರಿಗೆ ನೈರ್ಮಲ್ಯ ಜಾಗೃತಿ ಮೂಡಿಸುವ ಜತೆಗೆ, ಮಾವಿನ ಕಸದ ವಿಲೇವಾರಿ, ಚರಂಡಿಗಳ ಶುದ್ಧೀಕರಣ, ನಿತ್ಯ ತ್ಯಾಜ್ಯ ನಿರ್ವಹಣೆ ವಿಷಯಗಳಲ್ಲಿ ಕ್ರಮವಿಲ್ಲದೇ ಇದ್ದರೆ ್ಲ ಜ್ವರ, ಡೆಂ, ಟೈಫಾಯ್ಡ್​ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.

ಆಡಳಿತದ ಜವಾಬ್ದಾರಿ

ಸ್ಥಳಿಯ ಆಡಳಿತ, ಪುರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಹೊಂದಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ, ಮಾವಿನ ಮಾರುಕಟ್ಟೆಯ ಬೆಳವಣಿಗೆ ಆರೋಗ್ಯದ ಹಿನ್ನಡೆಯಾಗಿ ಪರಿಣಮಿಸಬಹುದು. ವ್ಯಾಪಾರ ಹಾಗೂ ಆರೋಗ್ಯ ಎರಡೂ ಸಮನ್ವಯವಾಗುವಂತೆಯೇ ಪರಿಸರ ನಿರ್ವಹಣೆ ಕಾರ್ಯತತ್ಪರತೆಯಿಂದ ನಡೆಯಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.