ವಿಜಯವಾಣಿ ಸುದ್ದಿಜಾಲ ಕುಂದಾಪುರ
ಹೊಸಾಡು ಗ್ರಾಮದ ಕಂಚುಗೋಡಿನ ಕಡಲ ತೀರದ ನಿವಾಸಿಗಳು ಅಲೆಗಳ ಅಬ್ಬರದಲ್ಲಿ ನೆಲ- ನೆಲೆ ಕೊಚ್ಚಿ ಹೋಗಬಹುದೆಂಬ ಆತಂಕದಲ್ಲೇ ದಿನ ಕಳೆಯುತ್ತಿದ್ದು, ದಶಕದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಮಳೆ ಬಿರುಸಾದರೆ ಇಲ್ಲಿನ ಜನತೆ ತಮ್ಮ ಸಾಮಗ್ರಿಗಳ ಸ್ಥಳಾಂತರಕ್ಕೆ ಸಿದ್ಧರಾಗಿರುತ್ತಾರೆ.
ಕಂಚುಗೋಡು ಪ್ರದೇಶದಲ್ಲಿ 7-8 ವರ್ಷಗಳಿಂದ ಶಾಶ್ವತ ತಡೆಗೋಡೆ ಬೇಡಿಕೆಯಿದ್ದು, ಇಲ್ಲಿನ ಜನತೆಗೆ ಅದು ಮರೀಚಿಕೆಯಾಗಿ ಉಳಿದಿದೆ. ಕಡಲತಡಿಯಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆ, ಸಮುದ್ರದ ಪ್ರತಿರೋಧ ಹೆಚ್ಚುತ್ತಲೇ ಇದೆ. ತ್ರಾಸಿ - ಮರವಂತೆ ಬೀಚ್ ಅಭಿವೃದ್ಧಿಗೆ ನಿರ್ಮಿಸಿದ ಟಿ ಆಕಾರದ ಬ್ರೇಕ್‌ವಾಟರ್, ಗುಜ್ಜಾಡಿಯ ಬೆಣ್ಗೆರೆ ಪ್ರದೇಶದಲ್ಲಿ ನಿರ್ಮಿಸಿದ ತಡೆಗೋಡೆಯಿಂದಾಗಿ ಹೊಸಾಡು ಗ್ರಾಮದ ಕಂಚುಗೋಡಿನಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಇಲ್ಲಿ ಕಡಲು ಸುಮಾರು 50 ಮೀ.ನಷ್ಟು ಮುಂದೆ ಬಂದಿದೆ. ತ್ರಾಸಿ, ಮರವಂತೆ, ಬೆಣ್ಗೆರೆಯ ಅಲೆಗಳ ಒತ್ತಡ ಜಾಸ್ತಿಯಾಗಿ, ಕಳೆದ 7- 8 ವರ್ಷಗಳಿಂದ ಕಂಚುಗೋಡಿನ ತೀರಕ್ಕೆ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಪ್ರತಿ ಬಾರಿಯೂ ಕಡಲ ದಂಡೆ ನಿವಾಸಿಗಳಿಗೆ ಆತಂಕ ಶುರುವಾಗುತ್ತಲೇ ಇರುತ್ತದೆ.
ಇಲ್ಲಿ ಸುಮಾರು 500 ಮೀ. ದೂರದ ತನಕ ತಡೆಗೋಡೆ ನಿರ್ಮಾಣವಾದರೆ ಸ್ಥಳೀಯ ನಿವಾಸಿಗರ ಬಹುದೊಡ್ಡ ಬೇಡಿಕೆ ಈಡೇರಿದಂತಾಗುತ್ತದೆ. ಅಲ್ಲದೇ ಕಂಚುಗೋಡು ಕಡಲ ತೀರದಲ್ಲಿ ನೆಲೆಸಿದ 45 ಮನೆಗಳಿಗೆ ರಕ್ಷಣೆಯೂ ದೊರೆಯಲಿದೆ. ಸುಮಾರು 7ರಿಂದ 8 ಮನೆಗಳು ಕಡಲಿಗೆ ತೀರಾ ಸನಿಹದಲ್ಲಿದ್ದು ಇವುಗಳಿಗೆ ಅಪಾಯ ತುಸು ಹೆಚ್ಚು ಇದೆ.
ಅಪಾಯ ಸಂದರ್ಭ ಎದುರಾದಾಗ ಪ್ರತಿ ಬಾರಿಯೂ ಎದುರಾಗುವ ಸಮಸ್ಯೆ ವಸತಿಯಿದ್ದು. ಸುಮಾರು ವರ್ಷಗಳಿಂದ ಶಾಶ್ವತ ತಡೆಗೋಡೆಗಾಗಿ ಹೋರಾಟ ಮಾಡುತ್ತಿದ್ದೇವೆ. ಇಲ್ಲಿಗೆ ಡಿಸಿ, ಅಧಿಕಾರಿಗಳು, ಸಂಸದರು, ಶಾಸಕರು ಬಂದರೂ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯ. -ಶಿವರಾಜ್ ಖಾರ್ವಿ ಕಂಚುಗೋಡು ಉಡುಪಿ ಜಿಲ್ಲೆಯ ಕಡಲ್ಕೊರೆತ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡುವುದಾಗಿ ಸಚಿವರು ಹೇಳಿದ್ದು, ಕಂಚುಗೋಡು ಸಹಿತ ವಿವಿಧೆಡೆಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಸ್ತುತ ಅವುಗಳಿಗೆ ಅನುಮೋದನೆ ಸಿಕ್ಕಿದ್ದು, ಮಂಜೂರಾತಿ ದೊರೆತ ಕೂಡಲೆ ಹಣ ಬಿಡುಗಡೆಯಾಗಲಿದೆ. -ಶೋಭಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬಂದರು ಮತ್ತು ಮೀನುಗಾರಿಕಾ ಇಲಾಖೆ https://www.vijayavani.net/distribution-of-scholarships-by-talluru-co-operative-society https://www.vijayavani.net/janapada-habba-inogaration-in-udupi